ಬೆಂಗಳೂರು: ‘ಖಾಸಗಿ ವಲಯದ ಉದ್ಯೋಗಿಗಳು ಆರ್ಥಿಕವಾಗಿ ಸಂಪಾದನೆ ಮಾಡುತ್ತಾರೆ. ಪಾಲಿಕೆಯ ಅಧಿಕಾರಿ, ಎಂಜಿನಿಯರ್ ಮತ್ತು ನೌಕರರು ಜನ ಸೇವೆ ಮಾಡುತ್ತಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ, ಎಂಜಿನಿಯರ್ ಜಯಂತಿ ಹಾಗೂ ಪಾಲಿಕೆಯ ಎಂಜಿನಿಯರ್‌ಗಳಿಗೆ ‘ಸರ್ ಎಂ.ವಿಶ್ವೇಶ್ವರಯ್ಯ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುವುದು ಬಹಳ ಕಷ್ಟ. ನಮ್ಮ ಎಂಜಿನಿಯರ್‌ಗಳು ಕಠಿಣ ಪರಿಸ್ಥಿತಿ ನಿಭಾಯಿಸಿಕೊಂಡು, ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ವಿಶ್ವೇಶ್ವರಯ್ಯರವರು ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯ ಶ್ರೀಮಂತಗೊಳಿಸಲು ಮೈಸೂರು ಮಹಾರಾಜರು ಹಾಗೂ ವಿಶ್ವೇಶ್ವರಯ್ಯರವರ ಕೊಡುಗೆ ಅಪಾರ’ ಎಂದು ಬಣ್ಣಿಸಿದರು.
‘ವಿಶ್ವೇಶ್ವರಯ್ಯರವರ ಸ್ಮರಣೆಯ ಅಂಗವಾಗಿ ಸಾಧಕ ಎಂಜಿನಿಯರ್‌ಗಳಿಗೆ ಸನ್ಮಾನ ಮಾಡಲಾಗಿದೆ. ಪೌರಕಾರ್ಮಿಕರು, ವೈದ್ಯರನ್ನೂ ಸ್ಮರಿಸಬೇಕು. ಎಲ್ಲಾ ವಲಯಗಳು ಒಟ್ಟುಗೂಡಿ ಕೆಲಸ ಮಾಡಿದರೆ ಮಾತ್ರ ಹೆಚ್ಚು ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರ ಕೆ.ಟಿ. ನಾಗರಾಜು ಮಾತನಾಡಿ, ‘ವಿಶ್ವೇಶ್ವರಯ್ಯ ಅವರು ಸುಣ್ಣ, ಇಟ್ಟಿಗೆ, ಮಣ್ಣನ್ನು ಬಳಸಿ ಕೆಆರ್‌ಎಸ್ ಅಣೆಕಟ್ಟು ಕಟ್ಟಿದ್ದಾರೆ. 90 ವರ್ಷವಾದರೂ ಅದು ಇಂದೂ ಸುಸ್ಥಿತಿಯಲ್ಲಿದೆ. ಹಿಂದಿನ ಕಾಲದಲ್ಲಿ ಯಾವುದೇ ವ್ಯವಸ್ಥೆ, ತಾಂತ್ರಿಕ ಸಲಕರಣೆ ಇಲ್ಲದೇ ಇದ್ದರೂ ಸರ್‌ಎಂವಿ ಅವರ ತಂತ್ರಜ್ಞಾನಕ್ಕೆ ಕೊರತೆ ಇರಲಿಲ್ಲ’ ಎಂದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಮಾತನಾಡಿ, ‘ನಗರ ಅಭಿವೃದ್ಧಿ ಯೋಜನೆಗಳಿಗೆ ಕಾರಣರಾಗಿರುವ ಎಂಜಿನಿಯರ್‌ಗಳಿಗೆ ವಿಶ್ವೇಶ್ವರಯ್ಯ ಅವರ ಜನ್ಮದಿನದಂದು ಪ್ರಶಸ್ತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಎಲ್ಲ ವಿಭಾಗದ ಸಾಧಕರನ್ನೂ ಗೌರವಿಸಲಾಗುತ್ತದೆ’ ಎಂದರು.
ವಿಶೇಷ ಆಯುಕ್ತರಾದ ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಉಪಸ್ಥಿತರಿದ್ದರು.
ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತರು
ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಆರ್. ಕಬಾಡೆ ಪೂರ್ವ ವಲಯ ಮುಖ್ಯ ಎಂಜಿನಿಯರ್ ಸುಗುಣ ನಗರ ಯೋಜನೆಯ ಜಂಟಿ ನಿರ್ದೇಶಕ ರಾಕೇಶ್ ಕುಮಾರ್ ಅಧೀಕ್ಷಕ ಎಂಜಿನಿಯರ್ ಎಚ್.ಎಸ್. ಮಹದೇಶ್ ಕಾರ್ಯಪಾಲಕ ಎಂಜಿನಿಯರ್‌ಗಳಾದ ರೂಪೇಶ್ ಮುನಿರೆಡ್ಡಿ ಎಲ್. ವೆಂಕಟೇಶ್ ಎಚ್.ಎಸ್. ರಾಮಚಂದ್ರಪ್ಪ ರಾಜಣ್ಣ ಬಿ. ಶರತ್ ಬಿ.ಎನ್.ಪ್ರದೀಪ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಆಶಾ ಚಂದ್ರಶೇಖರ್ ನಾಯಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.