ADVERTISEMENT

ಕಾಮಗಾರಿ ಅಪೂರ್ಣ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:28 IST
Last Updated 1 ಸೆಪ್ಟೆಂಬರ್ 2019, 19:28 IST
ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಿಸಲು ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಕ್ಕೂರು ಗ್ರಾಮಸ್ಥರು
ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಿಸಲು ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಕ್ಕೂರು ಗ್ರಾಮಸ್ಥರು   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ಗ್ರಾಮದಲ್ಲಿ ರೈ‌ಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ನಿಟ್ಟಿನಲ್ಲಿ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

‘ಜಕ್ಕೂರು ಮತ್ತು ಯಲಹಂಕಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದು. ಹಲವು ಬಡಾವಣೆಯ ಜನ ಈ ರಸ್ತೆಯನ್ನು ಬಳಸುತ್ತಿದ್ದರು. ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಸಹಯೋಗದಲ್ಲಿ ಈ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ 9 ವರ್ಷದ ಹಿಂದೆ ಪ್ರಾರಂಭವಾಯಿತು. ಆದರೆ, ಇದುವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿಗಾಗಿ ರಸ್ತೆ ಬಂದ್‌ ಆಗಿರುವುದರಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸಬೇಕಾ
ಗಿದೆ’ ಎಂದು ಜಕ್ಕೂರು ನಿವಾಸಿ ಚೇತನ್‌ ದೂರಿದರು.

‘ಮೇಲ್ಸೇತುವೆ ನಿರ್ಮಾಣಕ್ಕಾಗಿ ಬಿಬಿಎಂಪಿ ವಶಪಡಿಸಿಕೊಂಡ ಜಾಗದ ಮಾಲೀಕರಿಗೆ ಮೊದಲು ನೋಟಿಸ್‌ ಕೊಟ್ಟು ಕಾಮಗಾರಿ ಆರಂಭಿಸಬೇಕಾಗಿತ್ತು. ಆದರೆ ಬಿಬಿಎಂಪಿ ಆ ಕೆಲಸವನ್ನು ಮಾಡದೆ, ಪರಿಹಾರವನ್ನೂ ನೀಡದೆ ಕಾಮಗಾರಿ ಆರಂಭಿಸಿತು. ಇದರಿಂದ ಮನೆ ಕಳೆದುಕೊಂಡವರು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಕಾಮಗಾರಿ ಅರ್ಧಕ್ಕೇ ನಿಂತಿದೆ’ ಎಂದರು.

ADVERTISEMENT

‘ಮೇಲ್ಸೇತುವೆ ಅಕ್ಕಪಕ್ಕದಲ್ಲಿದ್ದ 50ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಿರುವುದರಿಂದ ಆ ಮನೆಯ ನಿವಾಸಿಗಳು ಕೂಡ ಬೀದಿಗೆ ಬಿದ್ದಿದ್ದಾರೆ’ ಎಂದು ತಿಳಿಸಿದರು.

‘ಈ ಹಿಂದೆ ಈ ಮಾರ್ಗದಲ್ಲಿ ಬಿಎಂಟಿಸಿಯ 12 ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಈ ಕಾಮಗಾರಿ
ಯಿಂದ ಆ ಬಸ್‌ಗಳ ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ. ಜಕ್ಕೂರಿನಿಂದ ಯಲಹಂಕ ಕೇವಲ 3 ಕಿ.ಮೀ. ಇತ್ತು. ಈಗ, ಜಿಕೆವಿಕೆ ಕ್ರಾಸ್‌ ಮತ್ತು ಅಳ್ಳಾಳಸಂದ್ರ ಮುಖ್ಯರಸ್ತೆಯ ಮೂಲಕ ಸುಮಾರು 6 ಕಿ.ಮೀ. ಪ್ರಯಾಣಿಸ ಬೇಕಾಗಿದೆ’ ಎಂದು ನಿವಾಸಿ ಚಂದ್ರಶೇಖರ್ ಅಳಲು ತೋಡಿಕೊಂಡರು.

‘ಸ್ಥಳೀಯ ಶಾಸಕರು, ಸಂಬಂಧಪಟ್ಟ ಸಚಿವರು, ಸಂಸದರೂ ಸೇರಿದಂತೆ ಪ್ರಧಾನಿ ನರೇದ್ರ ಮೋದಿಯ
ವರಿಗೂ ಪತ್ರ ಬರೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.