ADVERTISEMENT

ಪಿಡಬ್ಲ್ಯುಡಿ: 870 ಎಂಜಿನಿಯರ್‌ಗಳ ನೇಮಕ ಪ್ರಕ್ರಿಯೆ ರದ್ದು

ಕೆಇಎ ಬದಲು ಕೆಪಿಎಸ್‌ಸಿಯಿಂದ ಹೊಸದಾಗಿ ಹುದ್ದೆಗಳ ಭರ್ತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 19:39 IST
Last Updated 15 ಡಿಸೆಂಬರ್ 2019, 19:39 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ 870 ಎಂಜಿನಿಯರ್‌ಗಳ ನೇಮಕಾತಿಗಾಗಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ್ದ ಪ್ರಕ್ರಿಯೆಯನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರದ್ದುಪಡಿಸಿದೆ.

ಈ ಹುದ್ದೆಗಳೂ ಸೇರಿದಂತೆ ಒಟ್ಟು 1 ಸಾವಿರ ಹುದ್ದೆಗಳ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನಡೆಸಲು ತೀರ್ಮಾನಿಸಿದೆ.

‌ಕೆಪಿಎಸ್‌ಸಿ ಮೂಲಕ ನೇಮಕಾತಿ ಮಾಡಿಕೊಂಡರೆ ವಿಳಂಬವಾಗುತ್ತದೆ ಎಂಬ ನೆಪವೊಡ್ಡಿ ನಿಯಮಗಳನ್ನೆಲ್ಲ ಗಾಳಿಗೆ ತೂರಿ ತರಾತುರಿಯಲ್ಲಿ ಎಂಜಿನಿಯರ್‌ಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕ ಮಾಡಿಕೊಳ್ಳಲು ಈ ಹಿಂದಿನ ಸಮ್ಮಿಶ್ರ ಸರ್ಕಾರ ನಿರ್ಧರಿಸಿತ್ತು. ಈ ಸಲುವಾಗಿ ‘ಲೋಕೋಪಯೋಗಿ ಇಲಾಖೆಯ ಸೇವಾ ನಿಯಮಗಳು–2019 (ವಿಶೇಷ ನೇಮಕಾತಿ)’ ಸಿದ್ಧಪಡಿಸಿ, 570 ಸಹಾಯಕ ಎಂಜಿನಿಯರ್‌ಗಳು ಹಾಗೂ 300 ಕಿರಿಯ ಎಂಜಿನಿಯರ್‌ ಹುದ್ದೆಗಳ ಭರ್ತಿಗೆ ಈ ವರ್ಷದ ಮಾರ್ಚ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕಾಗಿ ಇಲಾಖೆಯಲ್ಲಿ ವಿಶೇಷ ಆಯ್ಕೆ ಸಮಿತಿ ರಚಿಸಲಾಗಿತ್ತು.

ADVERTISEMENT

ಸಚಿವ ಎಚ್‌.ಡಿ.ರೇವಣ್ಣ ಇಲಾಖೆಯಲ್ಲಿ ತಮ್ಮ ‘ಬಳಗ’ ದವರನ್ನೇ ತುಂಬಿಸಲು ಮುಂದಾಗಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿತ್ತು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಿತ್ತು. ಬಿಜೆಪಿ ಸರ್ಕಾರವು ಫಲಿತಾಂಶ ಪ್ರಕಟಣೆಯನ್ನು ತಡೆಹಿಡಿದಿತ್ತು. ಫಲಿತಾಂಶದ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಇದೀಗ, ಇಡೀ ನೇಮಕ ಪ್ರಕ್ರಿಯೆಯನ್ನೇ ರದ್ದುಪಡಿಸಲಾಗಿದೆ. ಈ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಈ ಅಭ್ಯರ್ಥಿಗಳ ವಯೋಮಿತಿ ಮೀರಿದ್ದರೆ ಅಧಿಸೂಚನೆಗೆ ಅನ್ವಯವಾಗುವಂತೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.

600 ಸಹಾಯಕ ಎಂಜಿನಿಯರ್‌ಗಳು, 325 ಕಿರಿಯ ಎಂಜಿನಿಯರ್‌ಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ನೇಮಕಾತಿಯನ್ನು ಕೆಪಿಎಸ್‌ಸಿ ನಡೆಸಲಿದೆ. ಈ ಸಂಬಂಧ ಕೆಪಿಎಸ್‌ಸಿಗೆ ಲೋಕೋಪಯೋಗಿ ಇಲಾಖೆ ನವೆಂಬರ್‌ 27ರಂದು ಪತ್ರ ಬರೆದಿದೆ.

ಉನ್ನತ ಮಟ್ಟದ ತೀರ್ಮಾನ?

‘ಕೊನೆಯ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಿದರೆ ಅರ್ಹ ಅಭ್ಯರ್ಥಿಗಳಿಗೂ ಅನ್ಯಾಯ ಆಗುವ ಸಾಧ್ಯತೆ ಇದೆ. ಹಾಗಾಗಿ, ಇದನ್ನು ರದ್ದುಪಡಿಸುವುದು ಬೇಡ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು. ಮೈತ್ರಿ ಸರ್ಕಾರದ ಅವಧಿಯ ನೇಮಕಾತಿ ಬಗ್ಗೆ ಬಿಜೆಪಿಯಲ್ಲೂ ಚರ್ಚೆ ನಡೆದಿತ್ತು. ಈ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದು ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.