ADVERTISEMENT

ನಿಯಮ ಉಲ್ಲಂಘಿಸಿ ಪುಸ್ತಕ ಖರೀದಿಗೆ ಟೆಂಡರ್‌: ಪ್ರಕಾಶಕರ ದೂರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 18:32 IST
Last Updated 2 ಫೆಬ್ರುವರಿ 2023, 18:32 IST

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಿದ್ಯಾರ್ಥಿನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಕೆ ಮಾಡಲು ಅಲ್ಪಾವಧಿ ಟೆಂಡರ್‌ ಕರೆಯಲಾಗಿದ್ದು, ಇದು ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಪ್ರಕಾಶಕರು ದೂರಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಇಲಾಖೆಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ 18 ಸದಸ್ಯರ ಆಯ್ಕೆ ಸಮಿತಿ ರಚಿಸಲಾಗಿದೆ. ಇದು ರಾಜ್ಯ ಮಟ್ಟದ ಸಮಿತಿಯಾಗಿದ್ದು, ಸಮಿತಿಯ ಶಿಫಾರಸ್ಸಿನ ಬಳಿಕವೇ ಪುಸ್ತಕಗಳ ಖರೀದಿಗೆ ಟೆಂಡರ್‌ ಕರೆಯಬೇಕು ಎಂದು ಪ್ರಕಾಶಕರು ಹೇಳಿದ್ದಾರೆ.

‘ಹಾಸನ ಜಿಲ್ಲೆಯಲ್ಲಿ ಇಂತಹದ್ದೊಂದು ಟೆಂಡರ್‌ ಕರೆಯಲಾಗಿದ್ದು, ಜ.2 ಟೆಂಡರ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ಟೆಂಡರ್‌ ಕರೆಯಲಾಗಿದೆ ಎಂದು ಹೇಳಲಾಗಿದ್ದು, ಆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಮೂಲಕ ಯಾವುದೋ ಒಂದೆರಡು ಪ್ರಕಾಶನಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆದಿದೆ’ ಎಂದು ಕರ್ನಾಟಕ ಪ್ರಕಾಶಕರ ಸಂಘದ ಸೃಷ್ಟಿ ನಾಗೇಶ್‌ ದೂರಿದರು.

ADVERTISEMENT

‘ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಆಯ್ಕೆ ಸಮಿತಿ ಮೂಲಕವೇ ಖರೀದಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ ಅದನ್ನು ಪಾಲಿಸುತ್ತಿಲ್ಲ’ ಎಂದು ಅವರು ಹೇಳಿದರು.

ಸಿ.ಎಂ.ಗೆ ಪತ್ರ: ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಏಕಗವಾಕ್ಷಿ ಯೋಜನೆಯ ಪುಸ್ತಕ ಖರೀದಿಗೆ ಹಣ ಬಿಡುಗಡೆ ಮಾಡಬೇಕು ಮತ್ತು ಕನ್ನಡ ಪುಸ್ತಕಗಳ ಪುಟವಾರು ಬೆಲೆಯನ್ನು ಪರಿಷ್ಕರಿಸಿ, ತಕ್ಷಣವೇ ಜಾರಿ ಮಾಡಬೇಕು ಎಂದು ವಿಧಾನಪರಿಷ್‌ ಸದಸ್ಯ ಎಚ್‌.ವಿಶ್ವನಾಥ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.