ADVERTISEMENT

‘ಪ್ರತಿ ಮಗುವಿಗೂ ತಪ್ಪದೇ ಲಸಿಕೆ ಹಾಕಿಸಿ’

ಪಲ್ಸ್‌ ಪೋಲಿಯೊ: ಜಾಗೃತಿಗೆ ಬಿಬಿಎಂಪಿ ಜತೆ ಕೈಜೋಡಿಸಿದ ರೋಟರಿ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:12 IST
Last Updated 7 ಮಾರ್ಚ್ 2019, 19:12 IST
ಮಾ. 10ರಂದು ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ
ಮಾ. 10ರಂದು ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ‍ಪಾಲಿಕೆಯು (ಬಿಬಿಎಂಪಿ) ಮಾ.10 ರಂದು ಜರುಗುವ ‘ಪಲ್ಸ್ ಪೋಲಿಯೊ’ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಯಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ.

ರೋಟರಿ ಸಂಸ್ಥೆಯು ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.‌ ‘ಐದು ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ’ ಮತ್ತು ‘ಪೋಲಿಯೊ ಮುಕ್ತ ಭಾರತಕ್ಕೆ ಕೈಜೋಡಿಸಿ’ ಎಂಬ ಸಂದೇಶವನ್ನು ಜಾಥಾದಲ್ಲಿ ಸಾರಲಾಗುತ್ತದೆ. ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಅಂಗವೈಕಲ್ಯ ತಪ್ಪಿಸಬಹುದು ಎಂಬ ಅರಿವು ಮೂಡಿಸಲಾಗುತ್ತದೆ.‌

ಮೇಯರ್ ಗಂಗಾಂಬಿಕೆ ಮತ್ತು ಉಪಮೇಯರ್‌ ಭದ್ರೇಗೌಡ ಅವರುಈ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಆಶಾ ಕಾರ್ಯಕರ್ತೆಯರು, ನರ್ಸಿಂಗ್‌ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ADVERTISEMENT

ರೋಟರಿ ಜಿಲ್ಲಾ ಪೋಲಿಯೊ ಸಮಿತಿಯ ಅಧ್ಯಕ್ಷ ಶಶಿಕಾಂತ್‌ ವಿ. ಪೊಬ್ಬತಿ, ‘ಜಗತ್ತನ್ನು ಪೋಲಿಯೊ ಪಿಡುಗಿನಿಂದ ಮುಕ್ತಮಾಡುವ ಕೆಲಸದಲ್ಲಿ ನಮ್ಮ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸೇರಿ ಕೆಲಸ ಮಾಡುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲೂ ಜಾಗೃತಿ ಆಂದೋಲನ ನಡೆಸಲಾಗುತ್ತಿದೆ’ ಎಂದು ಹೇಳಿದರು.

ರೋಟರಿ ಜಿಲ್ಲಾ ಗವರ್ನರ್‌ ಸುರೇಶ್‌ ಹರಿ, ‘ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕಾಗಿ ನಮ್ಮ ಸಂಸ್ಥೆಯಿಂದ ಇದುವರೆಗೆ 1.3 ಬಿಲಿಯನ್‌ ಡಾಲರ್‌ (₹9,230 ಕೋಟಿ) ನೆರವು ನೀಡಲಾಗಿದೆ’ ಎಂದು ಸ್ಮರಿಸಿದರು. ‘ಐದು ವರ್ಷದೊಳಗಿನ ಪ್ರತಿ ಮಗುವಿಗೂ ಲಸಿಕೆ ಹಾಕಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.