ADVERTISEMENT

ಬಾಬರಿ ಮಸೀದಿ ಧ್ವಂಸ,ಘರ್ ವಾಪ್ಸಿ..ದ್ವೇಷ ಹುಟ್ಟಿಸುವ ಚಟುವಟಿಕೆ: ರಾಮ್‌ ಪುನಿಯಾನಿ

ದೇಶದಲ್ಲಿ ಹೆಚ್ಚುತ್ತಿರುವ ಭಾವನಾತ್ಮಕ ಕಂದರ: ರಾಮ್‌ ಪುನಿಯಾನಿ ಕಳವಳ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 4:41 IST
Last Updated 13 ಸೆಪ್ಟೆಂಬರ್ 2019, 4:41 IST
ರಾಮ್‌ ಪುನಿಯಾನಿ
ರಾಮ್‌ ಪುನಿಯಾನಿ   

ಬೆಂಗಳೂರು: ಬಾಬರಿ ಮಸೀದಿ ಧ್ವಂಸ, ಘರ್ ವಾಪ್ಸಿಯಂತಹ ಚಟುವಟಿಕೆಗಳು ದ್ವೇಷವನ್ನು ಹುಟ್ಟಿಸುತ್ತದೆ. ಇಂತಹ ರಾಜಕಾರಣವನ್ನು ಹತ್ತಿಕ್ಕದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಹಿರಿಯ ಲೇಖಕ ರಾಮ್‌ ಪುನಿಯಾನಿ ಅಭಿಪ್ರಾಯಪಟ್ಟರು.

ಬೆಂಗಳೂರು ದಕ್ಷಿಣ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ‘ಸಮಕಾಲೀನ ತಲ್ಲಣಗಳು’ ಕುರಿತ ವಿಚಾರಸಂಕಿರಣದಲ್ಲಿ ಅವರು ‘ಕೋಮುವಾದದಿಂದ ಉಂಟಾಗಿರುವ ಪ್ರಕ್ಷುಬ್ಧತೆ’ ಬಗ್ಗೆ ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ, ಬಿ.ಆರ್‌.ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಅವರಂತಹ ನಾಯಕರು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರನ್ನು ಒಗ್ಗೂಡಿಸಲು ಯತ್ನಿಸಿದ್ದರು. ಆ ಸಮಯದಲ್ಲಿ ಇನ್ನೊಂದು ವರ್ಗವು ಧರ್ಮದ ಹೆಸರಿನಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಸಿತ್ತು. ಅಂತಹವರೇ ಇಂದು ಅಧಿಕಾರಕ್ಕೆ ಬಂದಿದ್ದಾರೆ. ಬ್ರಿಟಿಷರಂತೆಯೇ ಇವರು ಸಮಾಜವನ್ನು ಒಡೆದು ಆಳುತ್ತಿದ್ದಾರೆ’ ಎಂದರು.

ADVERTISEMENT

‘ದೇವಸ್ಥಾನ, ಗೋವು ಮುಂತಾದ ಭಾವನಾತ್ಮಕ ವಿಚಾರವನ್ನೊಳಗೊಂಡ ರಾಜಕಾರಣ ತಿರಸ್ಕರಿಸಬೇಕಾಗಿದೆ. ಅವರು ಧರ್ಮದ ಆಧಾರದಲ್ಲಿ ಮನಸುಗಳನ್ನು ಒಡೆದಷ್ಟೂ ನಾವು ಮತ್ತೆ ಕಟ್ಟಬೇಕಿದೆ. ಪ್ರೀತಿಯ ಮೂಲಕ ದ್ವೇಷವನ್ನು ಮಣಿಸಬೇಕಿದೆ’ ಎಂದರು.

ವಿಮರ್ಶಕಿ ಎಂ.ಎಸ್‌.ಆಶಾದೇವಿ, ‘ದೇಶದ ಮೂಲಶಕ್ತಿಯಾದ ಬಹುತ್ವವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ. ದೇಶ ಸರ್ವಜನಾಂಗದ ಶಾಂತಿಯ ತೋಟವಾಗುವ ಬದಲು ಸರ್ವಾಧಿಕಾರಿ ಆಡಳಿತದತ್ತ ಹೊರಳುತ್ತಿದೆ’ ಎಂದರು.

‘370ನೇ ವಿಧಿ ರದ್ದು ಎಷ್ಟು ಸರಿ?’

‘ಕಾಶ್ಮೀರದಲ್ಲಿ ಸಂವಿಧಾನದ 370ನೇ ಕಲಂ ನಿಷ್ಕ್ರಿಯಗೊಳಿಸಿದ್ದು ಸಂವಿಧಾನ ವಿರೋಧಿ ಹಾಗೂ ದೇಶ ವಿರೋಧಿ ಕೃತ್ಯವಲ್ಲವೇ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಪ್ರಶ್ನಿಸಿದರು.

‘ಕಾಶ್ಮೀರದ ರಾಜ ಹರಿಸಿಂಗ್‌ ಹಾಗೂ ಆಗಿನ ಕೇಂದ್ರ ಸರ್ಕಾರ ನಡುವಿನ ಪವಿತ್ರ ಒಪ್ಪಂದವನ್ನು ರದ್ದುಪಡಿಸಲಾಗಿದೆ. ಅದನ್ನು ರದ್ದು ಮಾಡಬೇಕಿದ್ದರೆ, ಅಲ್ಲಿನ ವಿಧಾನಸಭೆಯ ಸಮ್ಮತಿ ಅಗತ್ಯ. ಆದರೆ, ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದಿದ್ದಾಗ ಈ ತೀರ್ಮಾನ ಕೈಗೊಂಡಿದ್ದು ಎಷ್ಟರಮಟ್ಟಿಗೆ ಸರಿ’ ಎಂದರು.

‘ಇಂತಹ ಬೆಳವಣಿಗೆ ಬಗ್ಗೆ ಧ್ವನಿ ಎತ್ತದಿದ್ದರೆ ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆ ಅಪಾಯಕ್ಕೆ ಸಿಲುಕಲಿದೆ. ಮುಂದೊಂದು ದಿನ ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನೂ ಇದೇ ರೀತಿ ಛಿದ್ರಗೊಳಿಸಲೂಬಹುದು’ ಎಂದರು.

‘ಇಂತಹ ಅಪಾಯಕಾರಿ ಬೆಳವಣಿಗೆಗಳು ನಡೆದರೂ ದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿಲ್ಲ. ಈ ಕ್ರಮವನ್ನು ಪ್ರಶ್ನಿಸಿ ರಿಟ್‌ ಅರ್ಜಿಗಳು ಸಲ್ಲಿಕೆಯಾದರೂಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆ ನಡೆಸಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.