ADVERTISEMENT

‘ಸರ್ಕಾರಿ ಶಾಲೆ ಮುಚ್ಚುವ ಕೆಲಸ ನಿಲ್ಲಿಸಿ’

ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಆಗ್ರಹ *ಪುಸ್ತಕ ಸಂಸ್ಕೃತಿ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 16:09 IST
Last Updated 20 ಜನವರಿ 2023, 16:09 IST
ಪುಸ್ತಕಮನೆ ಹರಿಹರಪ್ರಿಯ ಅವರಿಗೆ ಪುಸ್ತಕ ತುಲಾಭಾರ ನಡೆಸಲಾಯಿತು. ಬರಗೂರು ರಾಮಚಂದ್ರಪ್ಪ, ಜಿಪಿಓ ಚಂದ್ರು, ರಂಗೋತ್ರಿಯ ಸಂಸ್ಥಾಪಕ ಕಾರ್ಯದರ್ಶಿ ಕುಮಾರ್ ಕೆ.ಎಚ್., ಎಂ. ಪ್ರಿಯದರ್ಶಿನಿ, ಹರಿಹರಪ್ರಿಯ ಅವರ ಪತ್ನಿ ಸುನಂದಾ ಹಾಗೂ ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಇದ್ದಾರೆ. –ಪ್ರಜಾವಾಣಿ ಚಿತ್ರ
ಪುಸ್ತಕಮನೆ ಹರಿಹರಪ್ರಿಯ ಅವರಿಗೆ ಪುಸ್ತಕ ತುಲಾಭಾರ ನಡೆಸಲಾಯಿತು. ಬರಗೂರು ರಾಮಚಂದ್ರಪ್ಪ, ಜಿಪಿಓ ಚಂದ್ರು, ರಂಗೋತ್ರಿಯ ಸಂಸ್ಥಾಪಕ ಕಾರ್ಯದರ್ಶಿ ಕುಮಾರ್ ಕೆ.ಎಚ್., ಎಂ. ಪ್ರಿಯದರ್ಶಿನಿ, ಹರಿಹರಪ್ರಿಯ ಅವರ ಪತ್ನಿ ಸುನಂದಾ ಹಾಗೂ ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾನ್ವೆಂಟ್‌ಗಳನ್ನು ತೆರೆಯಲು ಉತ್ತೇಜನ ಕೊಟ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ಯಾವುದೇ ಕಾರಣಕ್ಕೂ ಮಾಡಬಾರದು’ ಎಂದು ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಆಗ್ರಹಿಸಿದರು.

‌ರಂಗೋತ್ರಿ ಮಕ್ಕಳ ರಂಗಶಾಲೆ ನಗರದಲ್ಲಿ ಶುಕ್ರವಾರ ಆಯೋಜಿಸಿದ ಪುಸ್ತಕ ಸಂಸ್ಕೃತಿ ದಿನ ಕಾರ್ಯಕ್ರಮದಲ್ಲಿ 70ನೇ ಜನ್ಮದಿನಾಚರಣೆಯ ಪ್ರಯುಕ್ತ ಅವರಿಗೆ ಪುಸ್ತಕ ತುಲಾಭಾರ ನಡೆಸಲಾಯಿತು.

ಬಳಿಕ ಮಾತನಾಡಿದ ಅವರು, ‘ಕೆಲ ಪುಸ್ತಕಗಳನ್ನು ನಾನು ಓದಿದ ಗದ್ದೆಹೊಸೂರು ಸರ್ಕಾರಿ ಶಾಲೆಗೆ ನೀಡಬೇಕೆಂದು ನಿರ್ಧರಿಸಿದೆ. ಆದರೆ, ಆ ಶಾಲೆ ಈಗ ಮುಚ್ಚಿದೆ ಎಂದು ತಿಳಿದು ಬೇಸರವಾಯಿತು. ಆಂಗ್ಲ ಮಾಧ್ಯಮದ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹಳ್ಳಿಗಳಲ್ಲಿರುವ ಶಾಲೆಗಳನ್ನು ಉಳಿಸಬೇಕು. ನಮ್ಮ ಊರುಗಳಿಗೆ ಕೈಲಾದ ಕೊಡುಗೆ ನೀಡಬೇಕು. ನಮ್ಮ ಮನೆಯಲ್ಲಿ 5 ಲಕ್ಷ ಪುಸ್ತಕಗಳಿವೆ. ಪಿಲ್ಲರ್ ಇಲ್ಲದ ಮನೆಯಲ್ಲಿ ಇನ್ನಷ್ಟು ಪುಸ್ತಕ ಇರಿಸಿದಲ್ಲಿ ಮನೆ ಕುಸಿದು ಬೀಳಲಿದೆ’ ಎಂದರು.

ADVERTISEMENT

‘ಪುಸ್ತಕ ಸಂಸ್ಕೃತಿ ಈಗ ತನ್ನತನವನ್ನು ಕಳೆದುಕೊಂಡು, ಆಳುವವರ ಗುಲಾಮವಾಗಿದೆ. ವರ್ಣ ವರ್ಗಗಳ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬೀದಿ ಜಗಳ ಆಗಬಾರದು: ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಇತ್ತೀಚಿನ ದಿನಗಳಲ್ಲಿ ಜಾತಿವಾದ, ಧಾರ್ಮಿಕ ಮೂಲಭೂತವಾದ ವಿಜೃಂಭಿಸುತ್ತಿದೆ. ಜಾತಿ ತಾರತಮ್ಯತೆ ತೋರುವ ಅನೇಕರು ನಮ್ಮ ನಡುವೆ ಇದ್ದಾರೆ. ಭಿನ್ನಾಭಿಪ್ರಾಯದ ನಡುವೆ ಸ್ನೇಹದಿಂದ ಬದುಕುವುದು ಪ್ರಜಾಪ್ರಭುತ್ವದ ಲಕ್ಷಣ. ಭಿನ್ನಾಭಿಪ್ರಾಯ ಬೀದಿ ಜಗಳ ಆಗಬಾರದು’ ಎಂದು ತಿಳಿಸಿದರು.

‘ದೇಶದಲ್ಲಿ ಸುಮಾರು 19 ಸಾವಿರ ನೋಂದಾಯಿತ ಪ್ರಕಾಶನ ಸಂಸ್ಥೆಗಳಿವೆ. ₹ 26 ಸಾವಿರ ಕೋಟಿ ಬಂಡವಾಳವನ್ನು ಪುಸ್ತಕೋದ್ಯಮದಲ್ಲಿ ಹೂಡಲಾಗುತ್ತಿದೆ. 80 ಸಾವಿರಕ್ಕೂ ಅಧಿಕ ಪುಸ್ತಕಗಳು ವರ್ಷಕ್ಕೆ ಪ್ರಕಟವಾಗುತ್ತವೆ. ಪುಸ್ತಕ ಸಂಸ್ಕೃತಿಯ ಸಂರಕ್ಷಣೆ ಸಂಖ್ಯೆಯಿಂದ ನಿರ್ಧಾರವಾಗುವುದಿಲ್ಲ. ಒಂದು ಪುಸ್ತಕವೂ ಹೊಸದನ್ನು ಸೃಷ್ಟಿಸಬಹುದು. ಪುಸ್ತಕ ಸಂಸ್ಕೃತಿ ಸಮನ್ವಯ ಸಾಧಿಸಬೇಕು’ ಎಂದು ಹೇಳಿದರು.

ಎಸ್‌.ಎಲ್.ಎನ್. ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಎಂ. ಪ್ರಿಯದರ್ಶಿನಿ, ‘ಪುಸ್ತಕಮನೆ ಹರಿಹರಪ್ರಿಯ ಅವರು ಸಾಂಸ್ಕೃತಿಕ ಲೋಕಕ್ಕೆ ಅದ್ಭುತ ಪರಿಕಲ್ಪನೆ ನೀಡಿದ್ದಾರೆ. ಅವರಿಗೆ ನಾಡೋಜ ಪ್ರಶಸ್ತಿ ನೀಡಬೇಕು’ ಎಂದರು.

ಕಾಂಗ್ರೆಸ್‌ ಮುಖಂಡ ಹಾಗೂ ಬಯಲು ಪರಿಷತ್ ಅಧ್ಯಕ್ಷ ವೈ.ಎಸ್‌.ವಿ. ದತ್ತ, ಹರಿಹರಪ್ರಿಯ ಅವರ ‘ಕುವೆಂಪು ಒಲವು ನಿಲವು’ ಕೃತಿ ಬಿಡುಗಡೆ ಹಿಂದಿನ ಘಟನೆಗಳು ಹಾಗೂ 1979ರಲ್ಲಿ ಪಕ್ಷಾಂತರ ವಿರೋಧಿಸಿ ಸಮಾರಂಭ ನಡೆಸಿದ್ದನ್ನು ನೆನಪಿಸಿಕೊಂಡರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಂಚೆ ಚೀಟಿ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.