ADVERTISEMENT

ನಾವು ಕುಡಿಯುವ ನೀರು ಎಷ್ಟು ಸುರಕ್ಷಿತ ?

ನೀರಿನ ಮಾದರಿ ಪರೀಕ್ಷೆಯಲ್ಲಿ ವ್ಯತ್ಯಾಸ l ವೈಜ್ಞಾನಿಕ ವಿಧಾನ ಅಳವಡಿಕೆಗೆ ಹೆಚ್ಚಿದ ಒತ್ತಡ l ಬದಲಾಗಬೇಕಿದೆ ಗುಣಮಟ್ಟ ಪರಿಶೀಲನೆ ಮಾನದಂಡ

ಗುರು ಪಿ.ಎಸ್‌
Published 25 ನವೆಂಬರ್ 2019, 1:57 IST
Last Updated 25 ನವೆಂಬರ್ 2019, 1:57 IST
   

ಬೆಂಗಳೂರು: ನಗರದಲ್ಲಿ ನಾವು ಕುಡಿಯುತ್ತಿರುವ ನೀರು ಗುಣಮಟ್ಟದಿಂದ ಕೂಡಿದೆಯೇ? ನೀರಿನ ಮಾದರಿ ಪರೀಕ್ಷೆ ಎಷ್ಟು ವಿಶ್ವಾಸಾರ್ಹ ? ಪರೀಕ್ಷಾ ವಿಧಾನ ವೈಜ್ಞಾನಿಕವೇ? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೊರಟಾಗ ನಮಗೆ ಸಿಗುವುದು ವಿಭಿನ್ನ ಉತ್ತರಗಳು.

ಅದು ಕೋರಮಂಗಲ–ಚಳ್ಳಘಟ್ಟ (ಕೆ.ಸಿ. ವ್ಯಾಲಿ) ಕಣಿವೆ. ಇಲ್ಲಿ ದ್ವಿತೀಯ ಹಂತದವರೆಗೆ ಸಂಸ್ಕರಿಸುವ ನೀರನ್ನು ಕೋಲಾರ–ಚಿಕ್ಕಬಳ್ಳಾಪುರ ಕೆರೆಗಳಿಗೆ ತುಂಬಿಸಲಾಗುತ್ತದೆ. ಈ ನೀರನ್ನು ಪರೀಕ್ಷಿಸಿದ್ದ ಪ್ರತಿಷ್ಠಿತ ಸಂಸ್ಥೆಯ ವಿಜ್ಞಾನಿಯೊಬ್ಬರು ಈ ನೀರಿನಲ್ಲಿ ಸೀಸ, ಸತುವಿನಿಂತಹ ಘನ ಪದಾರ್ಥಗಳು ಇವೆ ಎಂದು ಹೇಳಿದ್ದರು. ಆದರೆ, ಜಲಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯು ನೀರು ಶುದ್ಧವಾಗಿದೆ. ಸಮಸ್ಯೆಯೇನೂ ಇಲ್ಲ ಎಂದು ಹೇಳಿದ್ದವು. ಸ್ಥಳೀಯ ಶಾಸಕರೊಬ್ಬರು ಆ ಕೆರೆಯ ನೀರನ್ನು ಕುಡಿಯುವ ಮೂಲಕ ಶುದ್ಧತೆಯನ್ನು ಪ್ರಮಾಣೀಕರಿಸಿದ್ದರು. ಆದರೆ, ಸ್ವಲ್ಪ ದಿನಗಳಲ್ಲಿಯೇ ಆ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿತು !

ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಸಂಗ್ರಹಿಸಲಾದ 10 ಮಾದರಿಗಳ ಪೈಕಿ ಐದು ಮಾದರಿಗಳು ಗುಣಮಟ್ಟದಲ್ಲಿ ವಿಫಲವಾಗಿವೆ ಎಂದುಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್‌) ವರದಿ ನೀಡಿದ ನಂತರ, ಇಂತಹ ವರದಿ ಮತ್ತು ಪರೀಕ್ಷೆಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.

ADVERTISEMENT

ಬಿಐಎಸ್‌ ಹೇಳಿರುವಂತೆ ಕುಡಿಯುವ ನೀರು ಅಶುದ್ಧವಾಗಿಯೇನೂ ಇಲ್ಲ. ನಾವು ಯೋಗ್ಯ ನೀರನ್ನೇ ಪೂರೈಸುತ್ತಿದ್ದೇವೆ ಎಂದು ಜಲಮಂಡಳಿ ಹೇಳುತ್ತದೆ.

ಪರೀಕ್ಷೆ ಹೇಗೆ ?

ನೀರಿನ ಗುಣ, ಲಕ್ಷಣ, ರುಚಿ ಮತ್ತು ವಾಸನೆಯ ಆಧಾರದ ಮೇಲೆ ಆರ್ಗೆನೊಲೆಪ್ಟಿಕ್‌ ಎನ್ನುವ ಭೌತಿಕ ಪರೀಕ್ಷೆಯನ್ನು ಬಿಐಎಸ್‌ ಮಾಡಿದೆ. ಜೊತೆಗೆ, ಸೋಡಿಯಂ ಪೊಟಾಷಿಯಂ, ಕ್ಯಾಲ್ಷಿಯಂ ಪ್ರಮಾಣ ನೋಡಿಕೊಂಡು ರಾಸಾಯನಿಕ ಪರೀಕ್ಷೆ ಮಾಡಿದೆಯಲ್ಲದೆ, ಸೀಸ, ಸತು, ಕೊಬಾಲ್ಟ್‌, ಕ್ರೋಮಿಯಂ ಅಂಶವನ್ನು ಪತ್ತೆಹಚ್ಚುವ ಟಾಕ್ಸಿಕ್‌ ಸಸ್ಟೆನ್ಸಸ್‌ ಪರೀಕ್ಷೆಯನ್ನೂ ಅದು ಮಾಡಿದೆ. ನೀರಿನಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಾಣು ಇರುವ ಪರೀಕ್ಷೆಯನ್ನು ಮಾಡಿರುವುದರಿಂದ ಈ ಅಧ್ಯಯನ ವರದಿಯನ್ನು ನಂಬಬಹುದಾಗಿದೆ. ಆದರೆ, ವರದಿಯ ಪೂರ್ಣ ವಿವರ ಈವರೆಗೆ ತಿಳಿದಿಲ್ಲವಾಗಿರುವುದರಿಂದ ವಿಶ್ಲೇಷಣೆ ಕಷ್ಟ. ಪ್ರಸ್ತಾಪಿಸಲಾಗಿರುವ ಅಂಶಗಳು ಏನೇ ಇದ್ದರೂ, ಜಲಮಂಡಳಿಯು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತ ಎನ್ನುತ್ತಾರೆ ವಿಜ್ಞಾನಿ ವಿ.ಎಸ್. ಪ್ರಕಾಶ್‌.

ಮರುಸಂಗ್ರಹಕ್ಕೆ ಸೂಚನೆ:ನೀರಿನ ಗುಣಮಟ್ಟ ದಿನದ 24 ಗಂಟೆಗಳಲ್ಲಿಯೂ ಬದಲಾಗುತ್ತಿರುತ್ತದೆ. ಹೀಗಾಗಿ, ಪರೀಕ್ಷೆಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವ ಅಗತ್ಯವಿದೆ. ಬಿಐಎಸ್‌ ಈಗ ನೀಡಿರುವ ಅಧ್ಯಯನ ವರದಿ ಬಗ್ಗೆ ಪರ–ವಿರೋಧ ವಾದಗಳು ಬಂದಿರುವುದರಿಂದ ನೀರಿನ ಮಾದರಿಗಳನ್ನು ಮರುಸಂಗ್ರಹಿಸಿ, ಪರೀಕ್ಷಿಸಿ ಮತ್ತೊಂದು ವರದಿ ನೀಡುವಂತೆ ಕೇಂದ್ರ ಸರ್ಕಾರ ಬಿಐಎಸ್‌ಗೆ ಸೂಚಿಸಿದೆ.

ವರದಿಯಲ್ಲಿ ವ್ಯತ್ಯಾಸವೇಕೆ ?: ‘ಬಿಐಎಸ್ನವರು ಯಾವ ನೀರಿನ ಮಾದರಿಯನ್ನು ಸಂಗ್ರಹಿಸಿದ್ದಾರೋ ಅದು ವರದಿ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಶೇ 5ರವರೆಗೆ ವಿನಾಯಿತಿ ಇದೆ. ಬೆಂಗಳೂರಿನ ನೀರಿನ ಮಾದರಿಗಳು ಶೇ 1.4ರಷ್ಟು ಮಾತ್ರ ವಿಫಲವಾಗಿವೆ. ನಾವು ಅನುಸರಿಸುವ ಮಾದರಿ ಪರೀಕ್ಷೆ ವಿಧಾನದ ಪ್ರಕಾರ, ನೀರಿನ ಗುಣಮಟ್ಟ ಹಾಳಾಗಿಲ್ಲ’ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌.

‘ಅಧ್ಯಯನ ವರದಿಯ ಪ್ರತಿ ಕಳುಹಿಸುವಂತೆ ಬಿಐಎಸ್‌ಗೆ ಇ–ಮೇಲ್‌ ಮಾಡಿದ್ದೇನೆ. ಈವರೆಗೆ ವರದಿ ಕೈ ಸೇರಿಲ್ಲ. ಅವರು ಯಾವ ಮಾದರಿ ಸಂಗ್ರಹಿಸಿದ್ದಾರೋ ಗೊತ್ತಿಲ್ಲ. ಆದರೂ, ಅವರು ವರದಿ ನೀಡುವುದಕ್ಕೆ ಮುನ್ನವೇ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ’ ಎಂದರು.

‘ನಾವು ಮಾದರಿ ಸಂಗ್ರಹಿಸುವಾಗ ಮನೆಗಳಲ್ಲಿ ಅಳವಡಿಸಲಾದ ನಲ್ಲಿಗಳ ನೀರನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಮನೆಯ ಸಂಪ್‌ಗೆ ಕೊಳವೆ ಬಾವಿ ನೀರು, ಮಳೆ ನೀರು ಅಥವಾ ಜಲಮಂಡಳಿ ನೀರು ಸೇರಿರಬಹುದು. 24 ಗಂಟೆ ಪೂರೈಸುವ ನೀರಿನ ಮೀಟರ್‌ ಪಕ್ಕದಲ್ಲಿನ ನಲ್ಲಿಗಳ ನೀರಿನ ಮಾದರಿಯನ್ನು ನಾವು ಸಂಗ್ರಹಿಸುತ್ತೇವೆ. ಮಾದರಿಗಳು ಬೇರೆ ಬೇರೆ ಇರುವುದರಿಂದ ಸಂಸ್ಥೆಗಳು ನೀಡುವ ವರದಿಯಲ್ಲಿ ವ್ಯತ್ಯಾಸವಾಗಬಹುದು’ ಎಂದರು.

ನಲ್ಲಿ ನೀರಿನ ಗುಣಮಟ್ಟ ಪರಿಶೀಲನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ನಲ್ಲಿ ನೀರು ಪರೀಕ್ಷೆಗೆ ಮಾನದಂಡವೇ ಇಲ್ಲ!

ಕೊಳವೆ ಮೂಲಕ ಅಥವಾ ನಲ್ಲಿಯಲ್ಲಿ ಪೂರೈಸುವುದಕ್ಕೆ ಯಾವುದೇ ಮಾನದಂಡವೂ ಇಲ್ಲ. ಹೀಗೆ, ಮಾನದಂಡವೇ ಇಲ್ಲವೆಂದ ಮೇಲೆ ಆ ನೀರು ಕುಡಿಯಲು ಯೋಗ್ಯವೋ–ಅಯೋಗ್ಯವೋ ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ. ರಾಷ್ಟ್ರ, ರಾಜ್ಯ, ಜಿಲ್ಲೆಗೆ ನಲ್ಲಿ ನೀರು ಪೂರೈಕೆಗೂ ಮಾನದಂಡ ತರುವ ಅವಶ್ಯಕತೆ ಇದೆ ಎನ್ನುತ್ತಾರೆ ವಿಜ್ಞಾನಿ ವಿ.ಎಸ್. ಪ್ರಕಾಶ್‌.

ಒಂದು ಸಮೀಕ್ಷೆಯ ಪ್ರಕಾರ, ನಗರದಲ್ಲಿ ಶೇ 40ರಷ್ಟು ನೀರು ಸೋರಿಕೆಯಾಗುತ್ತದೆ. ಕುಡಿಯುವ ನೀರಿನ ಪೈಪ್‌ ಒಡೆದು ಈ ಸೋರಿಕೆ ಉಂಟಾಗುತ್ತದೆ. ಇಷ್ಟು ನೀರು ಸೋರಿಕೆಯಾಗಿದೆ ಎಂದ ಮೇಲೆ, ಅಷ್ಟೇ ಪ್ರಮಾಣದ ಕಲುಷಿತ ನೀರು ಪೈಪ್‌ಗಳಲ್ಲಿ ತುಂಬಿಕೊಂಡಿದೆ ಎಂದರ್ಥ. ಒಂದು ಘಟಕದಷ್ಟು ನೀರು ಕಲುಷಿತಗೊಂಡಿದ್ದರೆ, ಅದು 2 ಕೋಟಿ ಘಟಕದಷ್ಟು ನೀರನ್ನು ಮಲಿನಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ.

15%-1995ರಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಾದರಿ ಸಂಗ್ರಹ

51%-ನೀರಿನ ಮಾದರಿ ಕುಡಿಯಲು ಯೋಗ್ಯವಿರಲಿಲ್ಲ (1995ರಲ್ಲಿ)

31%-ನಿರ್ಭಯವಾಗಿ ಕುಡಿಯಬಹುದಾದ ನೀರಿನ ಪ್ರಮಾಣ

31%- ಪ್ರಮಾಣದ ನೀರು ಕುಡಿಯಲು ಯೋಗ್ಯವಿರಲಿಲ್ಲ (2010ರಲ್ಲಿ)

ಅಶುದ್ಧ ನೀರಿನ ದುಷ್ಪರಿಣಾಮಗಳು

ನೀರಿನಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ, ಕಬ್ಬಿಣ, ಕ್ಲೋರೈಡ್, ನೈಟ್ರೇಟ್, ಸಲ್ಫೇಟ್‌, ಫ್ಲೋರೈಡ್‌ ಪರಿಮಿತಿ ಹೆಚ್ಚಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ಭೂಜಲ ವಿಜ್ಞಾನಿ ಟಿ.ಎಂ. ಶಿವಶಂಕರ್‌.

ಕಬ್ಬಿಣದಂಶ ಒಂದು ಲೀಟರ್ ನೀರಿನಲ್ಲಿ 1,000 ಮಿಲಿಗ್ರಾಂ ನಷ್ಟು ಮಾತ್ರ ಇರಬೇಕು. ಹೆಚ್ಚಿದ್ದರೆ ವಾಂತಿ, ಭೇದಿ, ವಾಕರಿಕೆ, ತೇಗು ಉಂಟಾಗುತ್ತದೆ. ನೈಟ್ರೇಟ್ ಒಂದು ವಿನಾಶಕಾರಿ ರಾಸಾಯನಿಕ ಘಟಕ. ಇದು ಒಂದು ಲೀಟರ್ ನೀರಿನಲ್ಲಿ 50 ಮಿಲಿ ಗ್ರಾಂನಷ್ಟು ಮಾತ್ರ ಇರಬೇಕು. ಈ ಪ್ರಮಾಣ ಹೆಚ್ಚಿದ್ದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ನಗರದ ಕೆಲವು ಹಳೆಯ ಪ್ರದೇಶಗಳಲ್ಲಿ ನಲ್ಲಿಯಲ್ಲಿ ಹರಿದು ಬರುವ ಕಾವೇರಿ ನೀರಿನಲ್ಲಿಇ-ಕೋಲಿಯಂತಹ ಬ್ಯಾಕ್ಟೀರಿಯಾ ಈ ಹಿಂದೆ ಪತ್ತೆಯಾಗಿತ್ತು. ಇಂತಹ ಇ–ಕೋಲಿ ಬ್ಯಾಕ್ಟೀರಿಯಾ ಹೆಚ್ಚಾಗಿದ್ದರೆ ಮೂತ್ರಪಿಂಡ ಮತ್ತು ಶ್ವಾಸಕೋಶಕ್ಕೆ ತೊಂದರೆಯಾಗುತ್ತದೆ ಎಂದು ಅವರು ಹೇಳುತ್ತಾರೆ.

ನೀರಿನಲ್ಲಿ ಬಿಡಿಸಿಎಂ ಅಂಶ ಜಾಸ್ತಿ ಇದ್ದರೆ ಯಕೃತ್ತು ಮತ್ತು ಮಿದುಳು ಸಮಸ್ಯೆ ಉಂಟಾಗುತ್ತದೆಯಲ್ಲದೆ, ಕ್ಯಾನ್ಸರ್‌ ಕೂಡ ಬರಬಹುದು. ಅದೇ ರೀತಿ,ಅಲ್ಯೂಮಿನಿಯಂ ಪ್ರಮಾಣ ಹೆಚ್ಚಿದ್ದರೆ ನರದೌರ್ಬಲ್ಯ, ಮರೆಗುಳಿತನ ಹಾಗೂ ಕಲುಷಿತ ಅಂಶ ಹೆಚ್ಚಿದ್ದರೆ ಕರುಳುಬೇನೆ, ಮಲಬದ್ಧತೆ ಉಂಟಾಗುತ್ತದೆ ಎಂದು ಶಿವಶಂಕರ್‌ ಹೇಳುತ್ತಾರೆ.

ಮಾದರಿ ಪ್ರಮಾಣ ದ್ವಿಗುಣ ಚಿಂತನೆ

‘ಡಬ್ಲ್ಯುಎಚ್‌ಒ ಪ್ರಕಾರ, ಪ್ರತಿ 10 ಸಾವಿರದಲ್ಲಿ ಒಂದು ಮಾದರಿ ಪರೀಕ್ಷೆ ಮಾಡಬೇಕು. ಆದರೆ, ಇನ್ನು ಮುಂದೆ ನಾವು 2.4ರಷ್ಟು ಮಾದರಿ ಸಂಗ್ರಹಿಸಲು ನಿರ್ಧರಿಸಿದ್ದೇವೆ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

‘ಈಗ ನಾವು 5 ಮಾನದಂಡಗಳನ್ನು ಇಟ್ಟುಕೊಂಡು ನೀರಿನ ಗುಣಮಟ್ಟ ಪರೀಕ್ಷೆ ಮಾಡುತ್ತಿದ್ದೇವೆ. ಮುಂದೆ, 17 ಮಾನದಂಡಗಳನ್ನು ಆಧರಿಸಿ ಪರೀಕ್ಷೆ ನಡೆಸಲಾಗುವುದು’ ಎಂದರು.

‘ನಗರದ ನೀರಿನ ಗುಣಮಟ್ಟದ ಬಗ್ಗೆ ಮಂಡಳಿಯ ವೆಬ್‌ಸೈಟ್‌ನಲ್ಲಿ ನಿತ್ಯ ವಿವರ ಪ್ರಕಟಿಸಲಾಗುತ್ತಿದೆ. ಆದರೆ, ಸದ್ಯ ಕಾವೇರಿ ನೀರಿನ ಪರೀಕ್ಷೆಯ ವರದಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿರಲಿಲ್ಲ. ಮುಂದೆ, ಈ ನೀರಿನ ವರದಿಯನ್ನೂ ನಿತ್ಯ ಪ್ರಕಟಿಸಲಾಗುವುದು’ ಎಂದು ಅವರು ತಿಳಿಸಿದರು.

ಪರೀಕ್ಷಾ ಏಜೆನ್ಸಿ ಬದಲು

ಜಲಮಂಡಳಿಯ ಪ್ರಯೋಗಾಲಯವಲ್ಲದೆ, ಬಿಎಆರ್‌ಸಿ ಎಂಬ ಹೊರಗಿನ ಪ್ರಯೋಗಾಲಯಕ್ಕೂನೀರು ಪರೀಕ್ಷೆಯ ಕಾರ್ಯವನ್ನು ವಹಿಸಲಾಗಿತ್ತು.ರಾಷ್ಟ್ರೀಯ ಪ್ರಯೋಗಾಲಯ ಪರೀಕ್ಷಾ ಮಾನ್ಯತಾ ಮಂಡಳಿ (ಎನ್‌ಎಬಿಎಲ್‌) ಪ್ರಮಾಣೀಕೃತ ಪ್ರಯೋಗಾಲಯ ಇದಾಗಿತ್ತು. ಇದನ್ನು ಬದಲಿಸುವ ಚಿಂತನೆ ಇದ್ದು, ಮತ್ತೊಂದು ಪ್ರಯೋಗಾಲಯಕ್ಕೆ ಈ ಹೊಣೆ ನೀಡಲಾಗುವುದು ಎಂದು ಗಿರಿನಾಥ್‌ ಹೇಳಿದರು.

ನೀರಿನಲ್ಲಿ ಪತ್ತೆಯಾದ ವಿಷಕಾರಕ ಅಂಶದ ಶೇ ಪ್ರಮಾಣ

ವರ್ಷ;ಕೊಳವೆ ಬಾವಿ;ನಲ್ಲಿ;ಬಾವಿ

2011–12;52;59;81

2010–11;51;52;81

2009–10;39;34;86

2008–09;46;39;77

ಹಿಂದೆಯೂ ಬಂದಿದ್ದವು ವರದಿ

ಈ ಹಿಂದೆ ಬೆಂಗಳೂರು ನೀರಿನ ಗುಣಮಟ್ಟ ಪರೀಕ್ಷೆ ಮಾಡಿದ್ದಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾಕಷ್ಟು ಪ್ರದೇಶದಲ್ಲಿ ನೀರು ಕಲುಷಿತವಾಗಿದೆ ಎಂದು ಹೇಳಿತ್ತು. ಇದಲ್ಲದೆ, ಜರ್ಮನ್‌ ಏಜೆನ್ಸಿಯೊಂದು 2018ರಲ್ಲಿ 1,423 ಮನೆಗಳ ನಲ್ಲಿ ನೀರಿನ ಮಾದರಿ ಸಂಗ್ರಹಿಸಿದ್ದು, ನೀರು ಕಲುಷಿತವಾಗಿದೆ ಎಂದು ತಿಳಿಸಿತ್ತು.

ಇದಕ್ಕೂ ಮುನ್ನ, ಅಂದರೆ1986ರಲ್ಲಿ ರಾಜೀವ್‌ ಗಾಂಧಿ ರಾಷ್ಟ್ರೀಯ ಕುಡಿಯುವ ನೀರಿನ ಮಿಷನ್‌ ನವರು ರಾಜ್ಯದಲ್ಲಿ ನೀರಿನ 42 ಸಾವಿರ ಮಾದರಿ ಸಂಗ್ರಹಿಸಿದ್ದರು. ನೀರು ಕುಡಿಯಲು ಹೆಚ್ಚು ಯೋಗ್ಯವಾಗಿಲ್ಲ ಎಂದು ಅವರು ಹೇಳಿದ್ದರು.

‌ಯಾವ ಮಾದರಿಯಲ್ಲಿ ಯಾವ ಅಂಶ ?

ನಗರದ ಮತ್ತಿಕೆರೆ, ಮಾಗಡಿ ರಸ್ತೆ, ರಾಜಾಜಿನಗರ, ಜಾಲಹಳ್ಳಿ ಪಶ್ಚಿಮ, ಚಿಕ್ಕಪೇಟೆ, ಬನಶಂಕರಿ, ಜಯನಗರ, ಕಮಲಾನಗರ, ವಿದ್ಯಾರಣ್ಯಪುರ ಹಾಗೂ ದೇವನಹಳ್ಳಿಯ ವಿಜಯಪುರದಿಂದ ಕೊಳವೆಗಳ ಮೂಲಕ ಹರಿದು ಗ್ರಾಹಕರು ನೀರು ಪಡೆಯುವಂತಹ ಹಂತದಲ್ಲಿನ ಮಾದರಿಗಳನ್ನು ಸಂಗ್ರಹಿಸಿರುವ ಬಿಐಎಸ್‌ ಈ ವರದಿ ನೀಡಿದೆ.

ನಗರದ ಎಲ್ಲ 10 ಮಾದರಿಗಳೂ ಒಂದೊಂದು ಪರೀಕ್ಷೆಯಲ್ಲಿ ವಿಫಲವಾಗಿವೆ. ಮತ್ತಿಕೆರೆಯಲ್ಲಿ ಸಂಗ್ರಹಿಸಿದ ಮಾದರಿ ಬ್ರೋಮೊಡೈಕ್ಲೊರೊಮೀಥೇನ್‌ ಪರೀಕ್ಷೆಯಲ್ಲಿ ವಿಫಲವಾಗಿದ್ದರೆ, ಜಾಲಹಳ್ಳಿಯಲ್ಲಿ ಸಂಗ್ರಹಿಸಲಾದ ಮಾದರಿಯಲ್ಲಿ ಕ್ಯಾಲ್ಶಿಯಂ ಕೊರತೆ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.