
ಎಸ್.ಎಂ. ವೀರಯ್ಯ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್. ನಂದಾ, ಎ.ಬಿ. ಪಾಟೀಲ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಡೀನ್ ಮೋಹನ್ ನಾಯಕ್, ಗ್ಲೋಬಲ್ ಗ್ರೀನ್ ಗ್ರೋತ್ ಸಿಎಂಡಿ ಚಂದ್ರಶೇಖರ್ ಎಂ. ಬಿರಾದಾರ್, ರೇನ್ ಫಾರೆಸ್ಟ್ ಅಲೈಯನ್ಸ್‌ನ ಸುಬ್ಬಾ ರೆಡ್ಡಿಕೊಂಡ, ಐಎಎಫ್‌ಟಿ ಅಧ್ಯಕ್ಷ ಎನ್.ಡಿ. ತಿವಾರಿ ಮತ್ತು ಸಿ.ಎನ್. ಶಿವಪ್ರಕಾಶ್ ಇದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಕ್ಕಂತೆ ಗುಣಮಟ್ಟದ ಜೇನುತುಪ್ಪ ಉತ್ಪಾದಿಸಬೇಕು’ ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎ.ಬಿ. ಪಾಟೀಲ ಸಲಹೆ ನೀಡಿದರು.
ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಕೃಷಿ ತಂತ್ರಜ್ಞರ ಸಂಸ್ಥೆ ಗುರುವಾರ ಆಯೋಜಿಸಿದ್ದ ‘ಜೇನು ಕೃಷಿ-ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಆಹಾರ’ ಕುರಿತ ತಾಂತ್ರಿಕ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 50 ಸಾವಿರ ರೈತರು ಜೇನು ಕೃಷಿ ಮಾಡುತ್ತಿದ್ದು, ವಾರ್ಷಿಕ ಒಂದು ಸಾವಿರ ಟನ್ ಜೇನುತುಪ್ಪ ಉತ್ಪಾದನೆ ಆಗುತ್ತಿದೆ. ಆದರೆ, ಗುಣಮಟ್ಟದ ಹಾಗೂ ಸಾವಯವ ಜೇನುತುಪ್ಪದ ಉತ್ಪಾದನೆ ಆಗುತ್ತಿಲ್ಲ. ಇದರಿಂದ ಜೇನು ಕೃಷಿಕರು ಬೇರೆ ಪ್ರದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಜೇನು ಕೃಷಿಕರು ಹಾಗೂ ಜೇನು ಖರೀದಿದಾರರನ್ನು ಸಂಪರ್ಕಿಸಲು ಒಂದು ವೇದಿಕೆ ಕಲ್ಪಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.
‘ಅಂತರರಾಷ್ಟ್ರೀಯ ಗುಣಮಟ್ಟದ ಸಾವಯವ ಜೇನುತುಪ್ಪದ ಉತ್ಪಾದನೆ ಹಾಗೂ ಪ್ರಮಾಣೀಕರಿಸುವ ವಿಷಯಗಳನ್ನು ಮಂಡನೆ ಮಾಡುವುದಲ್ಲದೇ, ಜೇನು ಕೃಷಿಕರಿಗೆ ಸೂಕ್ತ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಒದಗಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೆಪೆಕ್ ಅಧಿಕಾರಿಗಳು ಭಾಗವಹಿಸಿದ್ದು, ಜೇನುಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್, ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯಡಿ ₹15 ಲಕ್ಷ ಸಹಾಯಧನ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಜೇನುತುಪ್ಪದ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬಹುದು’ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕಿ ಎಸ್. ನಂದಾ ಮಾತನಾಡಿ, ‘ತೋಟಗಾರಿಕೆ ಇಲಾಖೆ ರಾಜ್ಯದಲ್ಲಿ ಉತ್ಪಾದಿಸುವ ಜೇನುತುಪ್ಪವನ್ನು ‘ಝೇಂಕಾರ್’ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜೇನುಕೃಷಿಗೆ ಸಂಬಂಧಿಸಿದಂತೆ ಆಸಕ್ತ ರೈತರಿಗೆ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ ಹನಿ ಪಾರ್ಕ್ ನಿರ್ಮಿಸುವ ಉದ್ದೇಶ ಇದೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜೇನು ಕೃಷಿಕ ಎಸ್.ಎಂ. ಶಾಂತವೀರಯ್ಯ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೇನು ಕೃಷಿಕರಾದ ಶಿರಸಿಯ ಮಧುಕೇಶ್ವರ ಹೆಗಡೆ, ಬೆಂಗಳೂರಿನ ಅಪೂರ್ವ ಬಿ.ವಿ., ಚಿಕ್ಕಮಗಳೂರಿನ ಚಂದ್ರಶೇಖರ ಬಿ.ಆರ್., ಬೆಂಗಳೂರಿನ ಗೀತಾ ಎಂ., ದಕ್ಷಿಣ ಕನ್ನಡ ಜಿಲ್ಲೆಯ ಎಂ. ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.