ADVERTISEMENT

ರಿಸ್ಯಾಟ್‌ಗೆ ವಿಶ್ವ ದರ್ಜೆಯ ಆಂಟೇನಾ

​ಪ್ರಜಾವಾಣಿ ವಾರ್ತೆ
Published 22 ಮೇ 2019, 20:01 IST
Last Updated 22 ಮೇ 2019, 20:01 IST

ಬೆಂಗಳೂರು: ರಿಸ್ಯಾಟ್‌ ಉಪಗ್ರಹ ಉಡಾವಣೆಯ ಯಶಸ್ಸಿನ ಜತೆಗೆ, ಇಸ್ರೊ ತಂತ್ರಜ್ಞರೇ ನಿರ್ಮಿಸಿದ ಛತ್ರಿಯ ಆಕಾರದ ಆಂಟೇನಾ (ರೇಡಿಯಲ್‌ ರಿಬ್‌ ಆಂಟೇನಾ) ಕಕ್ಷೆಯಲ್ಲಿ ಯಶಸ್ವಿಯಾಗಿ ಕಾರ್ಯಾರಂಭ ಮಾಡಿತು.

‘ಸಂಸ್ಥೆಯ ತಂತ್ರಜ್ಞರು 13 ತಿಂಗಳಲ್ಲಿ ಇದನ್ನು ನಿರ್ಮಿಸಿದ್ದಾರೆ. ವಿದೇಶದಿಂದ ಆಮದು ಮಾಡಿಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ಇಂತಹದ್ದೊಂದು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸರಿ ಸಮಾನ ಆಂಟೇನಾ ನಿರ್ಮಿಸಿದ ಕೀರ್ತಿ ನಮ್ಮ ತಜ್ಞರದು’ ಎಂದು ಇಸ್ರೊ ಹರ್ಷ ವ್ಯಕ್ತಪಡಿಸಿದೆ. ರಿಸ್ಯಾಟ್‌–2 ಬಿ ರಾಕೆಟ್‌ಗೆ 3.6 ಮೀಟರ್‌ ಆಂಟೇನಾವನ್ನು ಜೋಡಿಸಲಾಗಿತ್ತು. ಉಡಾವಣೆ ಸಂದರ್ಭದಲ್ಲಿಆಂಟೇನಾ ಛತ್ರಿಯಂತೆ ಮಡಿಸಿಕೊಂಡಿತ್ತು. ಬಾಹ್ಯಾಕಾಶ ನೌಕೆ ಕಕ್ಷೆಯನ್ನು ತಲುಪುತ್ತಿದ್ದಂತೆ ಆಂಟೇನಾ ಬಿಡಿಸಿಕೊಂಡಿತು.

ಹಗುರವಾದ ಈ ಆಂಟೇನಾ ತಿರುಗುವ ತಾಂತ್ರಿಕತೆಯನ್ನು ಹೊಂದಿದೆ. ಹೊಸ ಬಗೆಯ ಮೆಷ್‌ ಹೊಂದಿದೆ. ಆಂಟೇನಾ ಕಾರ್ಯ ನಿರ್ವಹಿಸುವಂತೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಬಾಹ್ಯಾಕಾಶ ಆಂಟೇನಾ ವ್ಯವಸ್ಥೆಯ ನಿರ್ವಹಣೆ ಅತ್ಯಂತ ಸೂಕ್ಷ್ಮವಾದುದು. ವಿನ್ಯಾಸ, ಕಾರ್ಯ ನಿರ್ವಹಣೆ ಮತ್ತು ಕಕ್ಷೆಗೆ ಉಪಗ್ರಹ ಸೇರಿಸುವ ಸಂದರ್ಭದಲ್ಲಿ ಸ್ವಯಂ ಆಗಿ ತೆರೆದುಕೊಂಡು ಕಾರ್ಯ ನಿರ್ವಹಿಸುವ ಕ್ಷಮತೆ ಅದ್ಭುತವಾದುದು ಎಂದು ಇಸ್ರೊ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.