ADVERTISEMENT

ಕಿದ್ವಾಯಿ: ನಾಯಿಗಳಿಗೆ ವಿಕಿರಣ ಚಿಕಿತ್ಸೆ ಕೇಂದ್ರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:18 IST
Last Updated 4 ಜುಲೈ 2018, 19:18 IST

ಬೆಂಗಳೂರು: ನಗರದ ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆ, ನೂತನ ಯೋಜನೆಯೊಂದಕ್ಕೆ ಕೈಹಾಕಿದೆ. ನಾಯಿಗಳಿಗಾಗಿ ವಿಕಿರಣ ಚಿಕಿತ್ಸೆ ಕೇಂದ್ರ ಆರಂಭಿಸುವ ಮೂಲಕ, ಈ ಪ್ರಯೋಗ ಮಾಡಿದ ದಕ್ಷಿಣ ಭಾರತದ ಮೊದಲ ಸಂಸ್ಥೆ ಎನಿಸಲಿದೆ.

ಇಷ್ಟು ದಿನ ಪ್ರಾಣಿಪ್ರಿಯರು ತಮ್ಮ ನಾಯಿಗಳ ಕ್ಯಾನ್ಸರ್‌ ಚಿಕಿತ್ಸೆಗಾಗಿ ಮುಂಬೈಗೆ ಹೋಗಬೇಕಿತ್ತು. ಆದರೆ ಈಗ ಬೆಂಗಳೂರಿನಲ್ಲೇ ಈ ಚಿಕಿತ್ಸೆ ದೊರೆಯಲಿದೆ.

ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ನಾಯಿಗಳ ಚಿಕಿತ್ಸೆಗಾಗಿ ಕಿದ್ವಾಯಿ ಸಂಸ್ಥೆ ಪ್ರತ್ಯೇಕ ವಿಭಾಗವನ್ನು ತೆರೆಯಲಿದೆ. ಈ ಚಿಕಿತ್ಸೆ ರಾಜ್ಯದ ಬೇರೆ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಇಲ್ಲ.

ADVERTISEMENT

ಮುಂಬೈನ ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ತಜ್ಞ ವೈದ್ಯರು ನೆರವು ನೀಡಲಿದ್ದಾರೆ. ಕಿದ್ವಾಯಿ ವಿಕಿರಣ ಚಿಕಿತ್ಸೆ ವಿಭಾಗದ ವೈದ್ಯರು ಕೂಡ ಕೈಜೋಡಿಸಲಿದ್ದಾರೆ.

ಮುಂಬೈ ಮೂಲದ ವೈದ್ಯರಾದ ರಾಜೀವ್‌ ಸರಿನ್‌ ಮತ್ತು ಪ್ರದೀಪ್‌ ಚೌಧರಿ ಇಲ್ಲಿ ಕೇಂದ್ರ ತೆರೆಯಲು ನೆರವು ನೀಡಲಿದ್ದಾರೆ. ‘ಬೆಂಗಳೂರು, ಚೆನ್ನೈ, ದೆಹಲಿ ಹಾಗೂ ಪುಣೆಯಿಂದ ಮುಂಬೈಗೆ ಪ್ರಾಣಿಪ್ರಿಯರು ಬರುತ್ತಾರೆ. ಅವರಿಗೆ ಪ್ರಯಾಣ ಮಾಡಲು ಸಾಕಷ್ಟು ತೊಂದರೆಯಾಗುತ್ತದೆ. ಅವರಲ್ಲಿ ಕೆಲವರು ನಾಯಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಸಾಕುತ್ತಾರೆ. ಚಿಕಿತ್ಸೆಗಾಗಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ತಯಾರಿರುತ್ತಾರೆ’ ಎಂದು ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ವೈದ್ಯ ಸರಿನ್‌ ಹೇಳಿದರು.

‘30 ವರ್ಷ ಹಿಂದಿನ ಕೋಬಾಲ್ಟ್‌ ಯಂತ್ರದ ಸಹಾಯದಿಂದ ಚಿಕಿತ್ಸೆ ನೀಡಲು ಕಿದ್ವಾಯಿ ಸಂಸ್ಥೆ ತಯಾರಿ ನಡೆಸಿದೆ. ಇದರಿಂದ ನಾಯಿಗಳ ಚಿಕಿತ್ಸೆಗೆ ಸಾಕಷ್ಟು ಸಹಾಯವಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.