ADVERTISEMENT

ಕೆ.ರಾಮಕೃಷ್ಣ ಬಂಧನ ಆಗಿಲ್ಲ ಏಕೆ: ಹೈಕೋರ್ಟ್ ಪ್ರಶ್ನೆ

ಗುರುರಾಘವೇಂದ್ರ ಸಹಕಾರ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 19:43 IST
Last Updated 20 ಆಗಸ್ಟ್ 2020, 19:43 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣದ ಆರೋಪಿ ಹಾಗೂ ಬ್ಯಾಂಕ್‌ನ ಅಧ್ಯಕ್ಷ ಕೆ.ರಾಮಕೃಷ್ಣ ಬಂಧಿಸದಿರಲು ಕಾರಣ ಏನು ಎಂಬುದನ್ನು ತಿಳಿಸುವಂತೆ ಸಿಐಡಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

‘ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ರಾಮಕೃಷ್ಣ ರಾಜಕೀಯ ವ್ಯಕ್ತಿ. ರಾಮಕೃಷ್ಣ ಮತ್ತು ಇತರ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ತನಿಖಾಧಿಕಾರಿ ಕೂಡಲೇ ವರದಿ ಸಲ್ಲಿಸಬೇಕು. ಆರೋಪಿಗಳನ್ನು ಪತ್ತೆ ಹಚ್ಚಲು ತನಿಖಾಧಿಕಾರಿಯಿಂದ ಸಾಧ್ಯವಾಗದಿದ್ದರೆ ಅವರನ್ನು ಬದಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪೀಠ ತಿಳಿಸಿತು.

ADVERTISEMENT

‘‍ಕೆಲ ಪ್ರಭಾವಿಗಳ ರಕ್ಷಣೆಯಲ್ಲಿ ರಾಮಕೃಷ್ಣ ಇದ್ದಂತಿದೆ. ಬ್ಯಾಂಕ್‌ನಿಂದ ಸಾಲ ಪಡೆದಿರುವ 27 ಸಾಲಗಾರರ ವಿರುದ್ಧದ ದೂರಿನ ವಿರುದ್ಧವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅರ್ಜಿದಾರರ ಪರ ವಕೀಲ ವೆಂಕಟೇಶ್ ಪಿ. ದಳವಾಯಿ ವಾದಿಸಿದರು.27 ಸಾಲಗಾರರ ಪಟ್ಟಿಯನ್ನು ಸೆಪ್ಟೆಂಬರ್ 4 ರಂದು ಸಲ್ಲಿಸುವಂತೆ ತನಿಖಾಧಿಕಾರಿಗೆ ಪೀಠ ಸೂಚನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.