ADVERTISEMENT

ರೈಲ್ವೆ ಉದ್ಯೋಗದ ಆಮಿಷ ₹2.30 ಕೋಟಿ ವಂಚನೆ

ನಕಲಿ ಆದೇಶಪತ್ರ ಸೃಷ್ಟಿ: ನಾಲ್ವರ ವಿರುದ್ಧ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:53 IST
Last Updated 19 ಮಾರ್ಚ್ 2019, 19:53 IST

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿದ್ದ ವಂಚಕರ ಜಾಲ, ರಾಜ್ಯದ 35ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ₹2.30 ಕೋಟಿ ಪಡೆದು ವಂಚಿಸಿದೆ.

ಆ ಸಂಬಂಧ ಕೆಂಪೇಗೌಡ ನಗರ ಠಾಣೆಯಲ್ಲಿ ದೂರು ದಾಖಲಿಸಿರುವ ದಿಲೀಪ್ ಅಡಿವೆಪ್ಪ ಗಸ್ತಿ ಎಂಬುವರು, ‘ಲಕ್ಷ್ಮಿಪುರದ ಸಿ.ರಾಮಕೃಷ್ಣ, ಶಿವರಾಮ್, ಚಂದ್ರಗೌಡ ಪಾಟೀಲ ಹಾಗೂ ಸತ್ಯಾ ಎಂಬುವರು ಹಣ ಪಡೆದು ವಂಚಿಸಿದ್ದಾರೆ’ ಎಂದಿದ್ದಾರೆ. ನಾಲ್ವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

‘2016ರಲ್ಲಿದಿಲೀಪ್ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ತಾವು ರೈಲ್ವೆ ಇಲಾಖೆ ನೌಕರರರು ಎಂದು ನಂಬಿಸಿದ್ದರು. ಕೇಳಿದಷ್ಟು ಹಣ ಕೊಟ್ಟರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದರು’ ಎಂದು ಕೆಂಪೇಗೌಡ ನಗರ ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಗಳ ಮಾತು ನಂಬಿದ್ದ ದಿಲೀಪ್, ಸ್ನೇಹಿತರು, ಆಪ್ತರಿಗೆ ವಿಷಯ ತಿಳಿಸಿ ಎಲ್ಲರಿಂದಲೂ ತಲಾ ₹5 ಲಕ್ಷದಿಂದ ₹15 ಲಕ್ಷದವರೆಗೆ ಹಣ ಸಂಗ್ರಹಿಸಿದ್ದರು. ಒಟ್ಟು ₹2.30 ಕೋಟಿಯನ್ನು ನಗದು ಹಾಗೂ ಬ್ಯಾಂಕ್‌ ಮೂಲಕ ಆರೋಪಿಗಳಿಗೆ ನೀಡಿದ್ದರು. ಕೆಂಪೇಗೌಡ ನಗರದ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಉದ್ಯಾನದಲ್ಲಿ ಹಣ ವರ್ಗಾವಣೆ ಆಗಿತ್ತು’ ಎಂದರು.

ನಕಲಿ ದಾಖಲೆಗಳ ಸೃಷ್ಟಿ: ‘ರೈಲ್ವೆ ಇಲಾಖೆಯ ಹುಬ್ಬಳ್ಳಿ ಅಥವಾ ಬೆಂಗಳೂರು ವಿಭಾಗದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದ ಆರೋಪಿಗಳು, ಅಭ್ಯರ್ಥಿಗಳ ಭಾವಚಿತ್ರ, ಆಧಾರ್, ಪ್ಯಾನ್ ಕಾರ್ಡ್, ಎಸ್ಸೆಸ್ಸೆಲ್ಸಿ– ಪಿಯುಸಿ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಇಲಾಖೆಯಿಂದ ನೇಮಕವಾಗಿರುವಂತೆ ನಂಬಿಸುವುದಕ್ಕಾಗಿ ಆರೋಪಿಗಳು, ನಕಲಿ ನೇಮಕಾತಿ ದಾಖಲೆ ಹಾಗೂ ಗುರುತಿನ ಚೀಟಿಗಳನ್ನು ಸೃಷ್ಟಿಸಿ ಕೆಲ ಅಭ್ಯರ್ಥಿಗಳಿಗೆ ಕೊಟ್ಟಿದ್ದರು. ಅವುಗಳನ್ನು ಪಡೆದಿದ್ದ ಅಭ್ಯರ್ಥಿಗಳು, ಉದ್ಯೋಗಕ್ಕೆ ಹಾಜರಾಗಲು ರೈಲ್ವೆ ಇಲಾಖೆಯ ಅಧಿಕಾರಿಗಳ ಬಳಿ ಹೋಗಿದ್ದರು. ಆಗ ದಾಖಲೆ ಹಾಗೂ ಗುರುತಿನ ಚೀಟಿಗಳು ನಕಲಿ ಎಂಬುದು ಗೊತ್ತಾಗಿತ್ತು’ ಎಂದರು.

ನ್ಯಾಯಾಲಯದ ನಿರ್ದೇಶನದಂತೆ ಎಫ್‌ಐಆರ್‌: ವಂಚಕರ ಕೃತ್ಯ ತಿಳಿಯುತ್ತಿದ್ದಂತೆ ಅಭ್ಯರ್ಥಿಗಳು, ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಉದ್ಯಾನದಲ್ಲಿ ಆರೋಪಿಯನ್ನು ಭೇಟಿಯಾಗಿ ತಮ್ಮ ಹಣ ವಾಪಸು ಕೊಡುವಂತೆ ಕೇಳಿದ್ದರು. ಆಗ ಆರೋಪಿ, ಅವಾಚ್ಯ ಶಬ್ದಗಳಿಂದ ಬೈದು ಅಭ್ಯರ್ಥಿಗಳಿಗೇ ಜೀವ ಬೆದರಿಕೆ ಹಾಕಿದ್ದರು.

ಆ ಬಗ್ಗೆ ಅಭ್ಯರ್ಥಿಗಳು ದೂರು ನೀಡಲು ಠಾಣೆಗೆ ಹೋದಾಗ ಅದನ್ನು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದರು. ನೊಂದ ಅಭ್ಯರ್ಥಿಗಳು, ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ‘ಉದ್ಯೋಗದ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದರನ್ವಯ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.