ADVERTISEMENT

ರೈಲ್ವೆ ಖಾಸಗೀಕರಣ ವಿರೋಧಿಸಿ ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 21:28 IST
Last Updated 21 ಸೆಪ್ಟೆಂಬರ್ 2020, 21:28 IST
ಕಾರ್ಮಿಕರು ಬೈಕ್ ರ‍್ಯಾಲಿ ನಡೆಸಿದರು
ಕಾರ್ಮಿಕರು ಬೈಕ್ ರ‍್ಯಾಲಿ ನಡೆಸಿದರು   

ಯಲಹಂಕ: ರೈಲ್ವೆ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರೈಲುಗಾಲಿ ಕಾರ್ಖಾನೆಯ ಮಜ್ದೂರ್ ಯೂನಿಯನ್ ಸದಸ್ಯರು ಹಾಗೂ ಕಾರ್ಮಿಕರು, ಕಾರ್ಖಾನೆಯ ಪಶ್ಚಿಮ ಬಡಾವಣೆಯ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ಕೇಂದ್ರ ಸರ್ಕಾರ ಮತ್ತು ರೈಲ್ವೆ ಮಂಡಳಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ದೂರಿದ ಕಾರ್ಮಿಕರು, ಘೋಷಣೆಗಳನ್ನು ಕೂಗಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎ.ವಿಜಯಕುಮಾರ್ ಮಾತನಾಡಿ, ’ಕಾರ್ಮಿಕರ ತುಟ್ಟಿ ಭತ್ಯೆ ಬಿಡುಗಡೆಗೊಳಿಸುವುದರ ಜೊತೆಗೆ ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ, ಹಳೇ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸಬೇಕು. ಹುದ್ದೆಗಳನ್ನು ಕಡಿತಗೊಳಿಸುವುದನ್ನು ನಿಲ್ಲಿಸಿ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಬೇಕು‘ ಎಂದರು.

ADVERTISEMENT

ಒಕ್ಕೂಟದ ಅಧ್ಯಕ್ಷ ಡಿ.ಮಹೇಂದ್ರ ಮಾತನಾಡಿ, ’ಸಾರ್ವಜನಿಕ ವಲಯದ ರೈಲ್ವೆಯನ್ನು ಖಾಸಗಿಯವರಿಗೆ ಅದರಲ್ಲೂ ಏಕಸ್ವಾಮ್ಯ
ಬಂಡವಾಳಗಾರರಿಗೆ ಹಸ್ತಾಂತರಿಸುವ ಈ ನೀತಿಯು, ಬೆರಳೆಣಿಕೆಯಷ್ಟು ಬಂಡವಾಳಗಾರರಿಗೆ ಹಾಗೂ ಕಾರ್ಪೊರೇಟ್ ಕುಳಗಳಿಗೆ ಮಾತ್ರ ಲಾಭವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಖಾಸಗೀಕರಣ ಮಾಡುವ ನಿರ್ಧಾರವನ್ನು ವಾಪಸ್ ಪಡೆಯಬೇಕು‘ ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ದಯಾನಂದ ರಾವ್, ವಿನಯ್ ಕುಮಾರ್, ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.