ADVERTISEMENT

ಮಳೆ: ಮರ ಬಿದ್ದು ವಾಹನಗಳು ಜಖಂ, ಮನೆಗಳಿಗೆ ನುಗ್ಗಿದ ನೀರು

ನಗರದಲ್ಲಿ ಸಂಜೆಯಿಂದ ರಾತ್ರಿ ತನಕ ಸಿಡಿಲು– ಗುಡುಗು ಸಹಿತ ವರ್ಷಧಾರೆ:

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:19 IST
Last Updated 4 ಅಕ್ಟೋಬರ್ 2019, 20:19 IST
ಮಳೆಯಿಂದಾಗಿ ಎಚ್‌ಎಸ್‌ಆರ್‌ ಲೇಔಟ್‌ 6ನೇ ಹಂತದ ಉದ್ಯಾನದಲ್ಲಿ ನೀರು ನಿಂತಿದ್ದು, ಅದರಲ್ಲೇ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋದರು – ಪ‍್ರಜಾವಾಣಿ ಚಿತ್ರಗಳು
ಮಳೆಯಿಂದಾಗಿ ಎಚ್‌ಎಸ್‌ಆರ್‌ ಲೇಔಟ್‌ 6ನೇ ಹಂತದ ಉದ್ಯಾನದಲ್ಲಿ ನೀರು ನಿಂತಿದ್ದು, ಅದರಲ್ಲೇ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋದರು – ಪ‍್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆಯಿಂದ ರಾತ್ರಿಯವರೆಗೆ ಸಿಡಿಲು ಹಾಗೂ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು, ಹಲವೆಡೆ ಮರಗಳು ನೆಲಕ್ಕುರುಳಿವೆ. ಕೆಲವೆಡೆ ರಸ್ತೆ ಮೇಲೆ ಹರಿದ ನೀರು ಮನೆಗಳಿಗೂ ನುಗ್ಗಿತ್ತು.

ಕೆಲ ದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯೂ ಸುರಿಯುತ್ತಿದೆ.ಗುರುವಾರ ರಾತ್ರಿಯೂ ಜೋರು ಮಳೆ ಆಗಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ಕಾಣಿಸಿಕೊಂಡಿತ್ತು. ಅದಾದ ನಂತರ ಮೋಡ ಕವಿದ ವಾತಾವರಣ ಮುಂದುವರಿಯಿತು. ಸಂಜೆ ವೇಳೆ ಆರಂಭವಾದ ಮಳೆಯ ಅಬ್ಬರ ಜೋರಾಗಿತ್ತು.

ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಯಶವಂತಪುರ, ಪೀಣ್ಯ, ಬಸವನಗುಡಿ, ಚಾಮರಾಜಪೇಟೆ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ವಿಲ್ಸನ್ ಗಾರ್ಡನ್, ಕೋರಮಂಗಲ, ಯಲಹಂಕ, ವಿದ್ಯಾರಣ್ಯಪುರ, ಹೆಬ್ಬಾಳ, ಸಹಕಾರ ನಗರ, ಬಾಣಸವಾಡಿ, ರಾಮಮೂರ್ತಿನಗರ, ಎಂ.ಜಿ.ರಸ್ತೆ, ಇಂದಿರಾನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಜೋರು ಮಳೆ ಆಯಿತು.

ADVERTISEMENT

‘ಬಾಣಸವಾಡಿಯ ಮ್ಯಾಕ್ಸ್‌ವೆಲ್‌ ಪಬ್ಲಿಕ್ ಶಾಲೆ ಬಳಿ ರಸ್ತೆ ಮೇಲೆಯೇ ಬೃಹತ್‌ ಗಾತ್ರದ ಮರವೊಂದು ಉರುಳಿಬಿದ್ದಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಎಂಟು ಕಾರುಗಳು ಜಖಂಗೊಂಡಿವೆ. ಸ್ಥಳದಲ್ಲಿ ಬಿಬಿಎಂಪಿ ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾರೆ’ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂದಿರಾನಗರದಲ್ಲೂ 2 ಮರಗಳು ನೆಲಕ್ಕುರುಳಿವೆ. ಆ ಬಗ್ಗೆ ದೂರು ಬರುತ್ತಿದ್ದಂತೆ ಅರಣ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಕಳುಹಿಸಲಾಗಿದೆ’ ಎಂದರು.

ಮನೆಗಳಿಗೆ ನುಗ್ಗಿದ ನೀರು: ಬಂಡೆಪಾಳ್ಯ, ಮಂಗಮ್ಮನಪಾಳ್ಯ, ಬೇಗೂರು ರಸ್ತೆಯ ವಿಶ್ವಪ್ರಿಯ ಲೇಔಟ್ ಹಾಗೂ ರಾಮಮೂರ್ತಿನಗರದ ನಾಗಪ್ಪ ಲೇಔಟ್‌ನಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿತ್ತು.

ರಸ್ತೆ ಮೇಲೆಯೇ ಹೊಳೆಯಂತೆ ನೀರು ಹರಿಯಿತು. ನೀರು ಕ್ರಮೇಣ ಮನೆಯೊಳಗೆ ನುಗ್ಗಿದ್ದರಿಂದ ನಿವಾಸಿಗಳು ಆತಂಕಗೊಂಡರು. ಪ್ರತಿಯೊಬ್ಬರು ನೀರನ್ನು ಹೊರಹಾಕುವುದರಲ್ಲಿ ನಿರತರಾಗಿದ್ದು ಕಂಡುಬಂತು. ಸ್ಥಳಕ್ಕೆ ಹೋದ ಅಗ್ನಿಶಾಮಕ ದಳ ಹಾಗೂ ಬಿಬಿಎಂಪಿ ಸಿಬ್ಬಂದಿ ರಸ್ತೆಯಲ್ಲಿದ್ದ ನೀರು ಹರಿದುಹೋಗಲು ಜಾಗ ಮಾಡಿದರು. ತಡರಾತ್ರಿ ನೀರಿನ ಹರಿಯುವಿಕೆ ಪ್ರಮಾಣ ಕಡಿಮೆಯಾಯಿತು.

ಮೆಟ್ರೊ ನಿಲ್ದಾಣದಲ್ಲೇ ಮೊಕ್ಕಾಂ: ಧಾರಾಕಾರ ಮಳೆಯಿಂದಾಗಿ ಹಲವು ಪ್ರಯಾಣಿಕರು ಮೆಟ್ರೊ ನಿಲ್ದಾಣಗಳಲ್ಲೇ ಕೆಲಕಾಲ ಮೊಕ್ಕಾಂ ಹೂಡಿದ್ದು ಕಂಡುಬಂತು.

ಪ್ರಯಾಣಿಕರು ನಿಗದಿತ ನಿಲ್ದಾಣಕ್ಕೆ ಹೋಗಿ ಇಳಿಯುತ್ತಿದ್ದಂತೆ ಹೊರಗಡೆ ಮಳೆ ಸುರಿಯುತ್ತಿತ್ತು. ಹೀಗಾಗಿ, ನಿಲ್ದಾಣದ ಮೆಟ್ಟಿಲುಗಳ ಮೇಲೆಯೇ ಪ್ರಯಾಣಿಕರು ಕುಳಿತುಕೊಂಡಿದ್ದರು. ಇದರಿಂದ ಮೆಟ್ಟಿಲು ಬಳಿ ಜನಸಂದಣಿ ಇತ್ತು. ಮಳೆ ಕಡಿಮೆಯಾದ ಬಳಿಕವೇ ಪ್ರಯಾಣಿಕರು ಅಲ್ಲಿಂದ ಹೊರಟು ಹೋದರು.

ಎಲ್ಲೆಲ್ಲೂ ನೀರು; ಸಂಚಾರ ದಟ್ಟಣೆ

ಜೋರಾಗಿ ಸುರಿದ ಮಳೆಯಿಂದಾಗಿ ರಸ್ತೆ ಹಾಗೂ ಕೆಳಸೇತುವೆಗಳಲ್ಲಿ ನೀರು ಹರಿಯಿತು. ಈ ಮಾರ್ಗದಲ್ಲಿ ಹೊರಟಿದ್ದ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಅದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಯಿತು.

ಶಿವಾನಂದ ವೃತ್ತ, ಮೆಜೆಸ್ಟಿಕ್, ಹೊಸೂರು ರಸ್ತೆ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.