ADVERTISEMENT

ನಗರದ ವಿವಿಧೆಡೆ ಗಾಳಿ ಸಹಿತ ಮಳೆ

ಇನ್ನೂ ಎರಡು ದಿನ ತುಂತುರು ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:39 IST
Last Updated 5 ಆಗಸ್ಟ್ 2019, 19:39 IST
ಸಂಜಯನಗರದಲ್ಲಿ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿರುವುದು  –ಪ್ರಜಾವಾಣಿ ಚಿತ್ರಗಳು
ಸಂಜಯನಗರದಲ್ಲಿ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿರುವುದು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದ ವಿವಿಧ ಕಡೆ ಸೋಮವಾರ ಮಧ್ಯಾಹ್ನ ಗಾಳಿ ಸಹಿತ ಮಳೆ ಸುರಿಯಿತು. ಬೆಳಗ್ಗಿನಿಂದ ಆವರಿಸಿಕೊಂಡಿದ್ದ ಮೋಡದಿಂದಾಗಿ ತಾಪಮಾನ ಮೂರು ಡಿಗ್ರಿ ಸೆಲ್ಸಿಯಸ್‍ನಷ್ಟು ಕುಸಿದ ಪರಿಣಾಮ ಇಡೀ ದಿನ ಚಳಿಯ ಅನುಭವ ಉಂಟಾಯಿತು.

ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಅಲ್ಲದೆ, ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರ ಜಿಲ್ಲೆಯಲ್ಲಿ ಜೂ.1 ರಿಂದ ಆ.5 ರವರೆಗೆ 187.8 ಮಿ.ಮೀ. ವಾಡಿಕೆ ಮಳೆ ಸುರಿಯುತ್ತದೆ. ಆದರೆ, ಈ ಬಾರಿ 123.4 ಮಿ.ಮೀ. ಮಳೆಯಾಗಿದ್ದು, ವಾಡಿಕೆಗೆ ಹೋಲಿಸಿದರೆ ಶೇ 34ರಷ್ಟು ಕೊರತೆಯಾಗಿದೆ.

ADVERTISEMENT

ಕೆಲವು ದಿನಗಳಿಂದ ಸಂಜೆಯಾಗುತ್ತಲೇ ಮಳೆಯಾಗುತ್ತಿತ್ತು. ಆದರೆ, ಸೋಮವಾರ ಮುಂಜಾನೆಯಿಂದಲೇ ಕೆಲವೆಡೆ ತುಂತುರು ಮಳೆಯಾಗಿದೆ. ಕೆಲವು ಭಾಗಗಳಲ್ಲಿ ಗಾಳಿಯ ಅಬ್ಬರವೂ ಕಂಡುಬಂತು.ಇದರಿಂದಾಗಿ ಕೆಲಹೊತ್ತು ಜನಜೀವನಕ್ಕೆ ಅಡ್ಡಿಯುಂಟಾಯಿತು.

ದಿಢೀರ್‌ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಬೈಕ್ ಸವಾರರು, ಪಾದಚಾರಿಗಳು ಬಸ್‌ ತಂಗುದಾಣ, ಅಂಡರ್‌ಪಾಸ್‍ಗಳ ಬದಿಯಲ್ಲಿ ನಿಂತರು. ಕಚೇರಿಯಿಂದ ಮನೆಗೆ ಮರಳುವ ಹೊತ್ತಿನಲ್ಲಿ ಸುರಿದ ಮಳೆಯಿಂದಾಗಿ ಜನ ಪರದಾಡಿದರು.

ನಗರದ ಕೇಂದ್ರ ಭಾಗಗಳಲ್ಲಿ ಭಾನುವಾರ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಮಳೆ ಸುರಿದ ಪರಿಣಾಮ ಸೋಮವಾರ 25.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಿತು. ಎಚ್‍ಎಎಲ್‍ನಲ್ಲಿ 26.6 ಡಿಗ್ರಿ, ಕೆಐಎಎಲ್‍ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಎಲ್ಲಿ ಎಷ್ಟು ಮಳೆ?: ಲಕ್ಕಸಂದ್ರದಲ್ಲಿ 5 ಮಿ.ಮೀ., ನಾಯಂಡಹಳ್ಳಿಯಲ್ಲಿ 3 ಮಿ.ಮೀ., ದಾಸನಪುರ, ಚಾಮರಾಜಪೇಟೆ, ಬಸವನಗುಡಿ, ರಾಜಾನುಕುಂಟೆ, ಐಟಿಸಿ ಜಾಲ, ಗಾಳಿ ಆಂಜನೇಯ ದೇವಸ್ಥಾನ, ದಯಾನಂದ ನಗರ, ಬೊಮ್ಮನಹಳ್ಳಿ, ಬಿಳೇಕಹಳ್ಳಿ, ಕೆಂಗೇರಿ, ರಾಜರಾಜೇಶ್ವರಿ ನಗರದಲ್ಲಿ ತಲಾ 2 ಮಿ.ಮೀ. ಮಳೆಯಾಗಿದೆ. ಕಿತ್ತನಹಳ್ಳಿ, ಮಾಚೋಹಳ್ಳಿ, ಮಾರೇನಹಳ್ಳಿ, ಚಿಕ್ಕಬಿದಿರಕಲ್ಲು, ಹುಣಸೆಮಾರನಹಳ್ಳಿ, ನಂದಿನಿ ಲೇಔಟ್, ಬೇಗೂರು, ಹಂಪಿನಗರ, ಅರಕೆರೆ, ಯಶವಂತಪುರ, ರಾಜಾಜಿನಗರ, ಕೆ.ಆರ್.ಮಾರುಕಟ್ಟೆ ಮತ್ತಿತರ ಕಡೆಗಳಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.