ADVERTISEMENT

ಬೈಕ್‌ ಸವಾರರಿಗೆ ಕೊಳಚೆ ಓಕುಳಿ ಸ್ನಾನ

ಮಳೆ ಬಂದರೆ ಓಕಳಿಪುರ ಜಂಕ್ಷನ್‌ನಲ್ಲಿ ಎದೆ ಮಟ್ಟದಷ್ಟು ನೀರು

​ಪ್ರಜಾವಾಣಿ ವಾರ್ತೆ
Published 28 ಮೇ 2019, 19:38 IST
Last Updated 28 ಮೇ 2019, 19:38 IST
ಓಕಳಿಪುರ ರೈಲ್ವೆ ಕೆಳಸೇತುವೆ ಬಳಿ ಮಳೆ ಬಂದಾಗ ತುಂಬಿಕೊಳ್ಳುವ ನೀರೆತ್ತಲು ಅಳವಡಿಸಿರುವ ಪಂಪ್‌ (ಎಡಚಿತ್ರ) ಮಳೆ ಬಂದಾಗ ನೀರು ತುಂಬಿಕೊಳ್ಳುವ ಓಕಳಿಪುರ ರೈಲ್ವೆ ಕೆಳಸೇತುವೆ ಪ್ರದೇಶ –ಪ್ರಜಾವಾಣಿ ಚಿತ್ರ
ಓಕಳಿಪುರ ರೈಲ್ವೆ ಕೆಳಸೇತುವೆ ಬಳಿ ಮಳೆ ಬಂದಾಗ ತುಂಬಿಕೊಳ್ಳುವ ನೀರೆತ್ತಲು ಅಳವಡಿಸಿರುವ ಪಂಪ್‌ (ಎಡಚಿತ್ರ) ಮಳೆ ಬಂದಾಗ ನೀರು ತುಂಬಿಕೊಳ್ಳುವ ಓಕಳಿಪುರ ರೈಲ್ವೆ ಕೆಳಸೇತುವೆ ಪ್ರದೇಶ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಳೆ ಬಂದಾಗ ಓಕಳಿಪುರ ಜಂಕ್ಷನ್‌ನಲ್ಲಿ ಹಾದು ಹೋಗುವ ಬೈಕ್‌ ಸವಾರರು ಚರಂಡಿ ನೀರಿನಲ್ಲಿ ಮಿಂದೇ ಹೋಗಬೇಕು!

ಓಕಳಿಪುರದಲ್ಲಿ ಸಿಗ್ನಲ್ ರಹಿತ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಭಾಗದಲ್ಲಿ ರೈಲ್ವೆ ಕೆಳಸೇತುವೆ ಕೆಲಸ ನಡೆಯುತ್ತಿದ್ದರೆ, ಕಾಮಗಾರಿ ಪೂರ್ಣಗೊಂಡಿರುವ ಕಡೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಇಲ್ಲಿ ನಿರ್ಮಿಸಿರುವ ಕೆಳಸೇತುವೆಗಳು ತಗ್ಗು ಪ್ರದೇಶದಲ್ಲಿವೆ. ಸ್ವಲ್ಪ ಮಳೆ ಬಂದರೂ ಒಳಚರಂಡಿ ನೀರು ಕೆಳಸೇತುವೆಯಲ್ಲಿ ತುಂಬಿಕೊಳ್ಳುತ್ತದೆ. ಕ್ಷಣಾರ್ಧದಲ್ಲೇ ಎದೆ ಮಟ್ಟಕ್ಕೆ ನೀರು ನಿಲ್ಲುತ್ತದೆ. ವಾಹನಗಳು ಇಲ್ಲಿ ನಿಂತ ನೀರಿನಲ್ಲೇ ಹಾದುಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ADVERTISEMENT

ಮೆಜೆಸ್ಟಿಕ್‌ನಿಂದ ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಮಾಗಡಿ ರಸ್ತೆ, ತುಮಕೂರು ಕಡೆಗೆ ಹೋಗುವ ವಾಹನಗಳು ಈ ಮಾರ್ಗದಲ್ಲಿ ಹಾದು ಹೋಗುತ್ತವೆ. ಹೀಗಾಗಿ, ಇಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಮಳೆ ಬಂದಾಗಲಂತೂ ಕೆಳಸೇತುವೆಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತದೆ.

‘ಎಕ್ಸ್‌ಪ್ರೆಸ್‌ ಕಾರಿಡಾರ್ ಯೋಜನೆಯಿಂದ ಸಮಸ್ಯೆ ಕಡಿಮೆ ಆಗುತ್ತದೆ ಭಾವಿಸಿದ್ದೆವು. ಆದರೆ, ಸಮಸ್ಯೆ ಮತ್ತಷ್ಟು ಜಾಸ್ತಿ ಆಗಿದೆ.ಕಾರಿಡಾರ್‌ ವಿನ್ಯಾಸಗೊಳಿಸಿರುವ ಎಂಜಿನಿಯರ್‌ಗಳು ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕಿತ್ತು. ದ್ವಿಚಕ್ರ ವಾಹನ ಸವಾರರಂತೂ ನೀರಿನಲ್ಲಿ ಈಜಾಡಿಕೊಂಡೇ ಹೋಗಬೇಕಾದ ಸ್ಥಿತಿ ಇದೆ’ ಎಂದು ಆಟೊ ಚಾಲಕ ಬಾಬಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಪಂಪ್ ಸೆಟ್‌ ಅಳವಡಿಕೆ: ‘ತುಂಬಿಕೊಳ್ಳುವ ನೀರನ್ನು ಹೊರಹಾಕಲು ಬಿಬಿಎಂಪಿ ಪಂಪ್‌ ಸೆಟ್‌ ಅಳವಡಿಸಿದೆ. ಮಳೆ ಬಂದಾಗ ಸಿಬ್ಬಂದಿ ಇದ್ದರೆ ಮಾತ್ರ ಮೋಟರ್ ಆನ್ ಮಾಡುತ್ತಾರೆ. ಆದರೆ, ಒಂದೇ ಪಂಪ್‌ ಸೆಟ್‌ ಬಳಸಿ ಭಾರಿ ಪ್ರಮಾಣದ ನೀರನ್ನು ಹೊರಹಾಕಲು ಸಾಕಷ್ಟು ಸಮಯ ಹಿಡಿಯುತ್ತಿದೆ. ಹೀಗಾಗಿ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವುದು ಅನಿವಾರ್ಯ’ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದರು.

ರೈಲ್ವೆ ನಿಲ್ದಾಣದ ಒಳಚರಂಡಿ ನೀರು

ರೈಲು ನಿಲ್ದಾಣದ ಕಡೆಯಿಂದ ಬರುವ ಒಳಚರಂಡಿ ನೀರು ಈ ಸೇತುವೆ ಕೆಳಗೆ ನಿಲ್ಲುತ್ತಿದೆ. ಇದನ್ನು ತಪ್ಪಿಸುವಂತೆ ರೈಲ್ವೆ ಇಲಾಖೆಗೆ ಹಲವು ಬಾರಿ ತಿಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಿಸಿಕೊಂಡು ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸುವಂತೆ ರೈಲ್ವೆ ಇಲಾಖೆಗೆ ಜಲಮಂಡಳಿ ನೋಟಿಸ್ ಕೂಡ ನೀಡಿದೆ. ಎಸ್‌ಟಿಪಿ ಘಟಕ ನಿರ್ಮಾಣವನ್ನು ರೈಲ್ವೆ ಇಲಾಖೆ ಮಾಡುತ್ತಿದೆ. ಕಾಮಗಾರಿ ಮುಗಿದರೆಸಮಸ್ಯೆ ಶೇ 80ರಷ್ಟು ಕಡಿಮೆಯಾಗಲಿದೆ ಎಂದರು.

ರೈಲ್ವೆ ಇಲಾಖೆ ಜತೆ ಚರ್ಚೆ

‘ಓಕಳಿಪುರ ಜಂಕ್ಷನ್‌ ಸಮಸ್ಯೆ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳ ಜತೆಚರ್ಚೆ ನಡೆಸುತ್ತೇನೆ’ ಎಂದು ಮೇಯರ್ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್‌ಟಿಪಿ ನಿರ್ಮಿಸಿಕೊಳ್ಳುವುದಾಗಿ ರೈಲ್ವೆ ಇಲಾಖೆ ಈ ಹಿಂದೆ ಹೇಳಿತ್ತು. ಅದು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತೇನೆ’ ಎಂದರು. ‘ಮಳೆ ಬಂದಾಗ ತುಂಬಿಕೊಳ್ಳುವ ನೀರೆತ್ತಲು ತಾತ್ಕಾಲಿಕವಾಗಿ ಹೆಚ್ಚಿನ ಸಾಮರ್ಥ್ಯದ ಎರಡು ಪಂಪ್‌ಸೆಟ್‌ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ಮಂದಗತಿಯ ಕೆಲಸ: 2 ಸೇತುವೆ ಕಾಮಗಾರಿ ಬಾಕಿ

ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿ ಮತ್ತು ರೈಲ್ವೆ ಇಲಾಖೆಗಳು ಜಂಟಿಯಾಗಿ ಕೈಗೊಂಡಿವೆ.

‘ಎರಡು ಕಡೆ ರೈಲು ಹಳಿಗಳು ಹಾದು ಹೋಗುವ ಕಾರಣ ಕೆಳಸೇತುವೆ ಕಾಮಗಾರಿಯನ್ನು ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಇಲಾಖೆಯೇ ನಿರ್ವಹಿಸುತ್ತಿದೆ.10 ಕೆಳಸೇತುವೆಗಳ ಬಾಕ್ಸ್‌ಗಳನ್ನು ನಿರ್ಮಿಸಬೇಕಿದ್ದು, ಅದರಲ್ಲಿ 8 ಬಾಕ್ಸ್‌ಗಳು ಸಜ್ಜಾಗಿವೆ. ಇನ್ನೂ 2 ಸೇತುವೆಗಳ ಕಾಮಗಾರಿ ಬಾಕಿ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಸರ್ಕಾರ ಈ ಕಾರಿಡಾರ್ ಅನ್ನು 2018ರಲ್ಲೇ ಉದ್ಘಾಟನೆ ಮಾಡಿದೆ. ಯೋಜನೆ ಪ್ರಕಾರ ಎಲ್ಲ ಕಾಮಗಾರಿಗಳೂ 2017ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕೆಲಸ ಇನ್ನೂ ಕುಂಟುತ್ತಲೇ ಸಾಗುತ್ತಿದೆ.

***

ಮಳೆ ಬಂದಾಗ ಓಕಳಿಪುರ ಜಂಕ್ಷನ್‌ ಕಡೆಗೆ ಹೋದರೆ ಒಳಚರಂಡಿ ನೀರಿನಲ್ಲಿ ಸ್ನಾನವಾಗುತ್ತದೆ. ಅನಾರೋಗ್ಯಕ್ಕೆ ಒಳಗಾದರೆ ಯಾರು ಹೊಣೆ
-ಸಂತೋಷ್, ಸುಂಕದಕಟ್ಟೆ ನಿವಾಸಿ

ದ್ವಿಚಕ್ರ ವಾಹನದಲ್ಲಿ ಬಂದರೆ ಜೀವ ಬಿಗಿ ಹಿಡಿದು ಸಂಚರಿಸಬೇಕು. ಅನಾಹುತವಾದರೆ ಸರ್ಕಾರ ಹೊಣೆ ಹೊರುತ್ತದೆಯೇ
-ಹರೀಶ್‌, ಖಾಸಗಿ ಕಂಪನಿ ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.