ADVERTISEMENT

ಬೆಂಗಳೂರು | ರಸ್ತೆಯಲ್ಲೇ ಮಳೆ ನೀರು: ನಾಗರಿಕರ ಪರದಾಟ

ಮನೆಗೆ ‌‌ತೆರಳಲು ವಿದ್ಯಾರ್ಥಿಗಳ ಪರದಾಟ: ವಾಹನ ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 18:29 IST
Last Updated 19 ಆಗಸ್ಟ್ 2024, 18:29 IST
ನಾಗಶೆಟ್ಟಿಹಳ್ಳಿ ಸಮೀಪದ ಎನ್‌ಟಿಐ ಲೇಔಟ್‌ನಲ್ಲಿ ನೀರು ತುಂಬಿದ ರಸ್ತೆ ದಾಟಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ ಪೋಷಕರು
ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ಧನ್
ನಾಗಶೆಟ್ಟಿಹಳ್ಳಿ ಸಮೀಪದ ಎನ್‌ಟಿಐ ಲೇಔಟ್‌ನಲ್ಲಿ ನೀರು ತುಂಬಿದ ರಸ್ತೆ ದಾಟಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ ಪೋಷಕರು ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ಧನ್   

ಬೆಂಗಳೂರು: ನಗರದ ಕೆಲವು ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡು, ವಿದ್ಯಾರ್ಥಿಗಳು ಮನೆಗೆ ಹೋಗಲು ಹರಸಾಹಸಪಟ್ಟರು.

ಮಳೆ ಹೆಚ್ಚು ಸುರಿಯದಿದ್ದರೂ ನೀರು ಚರಂಡಿಗಳಲ್ಲಿ ಸಾಗದೆ, ರಸ್ತೆಯ ಮೇಲೇ ನಿಂತಿದ್ದರಿಂದ ನಾಗರಿಕರು, ವಾಹನಗಳು ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದವು. ಹಲವು ವಾಹನಗಳು ಕೆಟ್ಟು ನಿಂತಿದ್ದರಿಂದ, ನಾಗರಿಕರು ಅವುಗಳನ್ನು ತಳ್ಳಿದರು.

ನಾಗಶೆಟ್ಟಿಹಳ್ಳಿ ಸಮೀಪದ ಎನ್‌ಟಿಐ ಬಡಾವಣೆಯ ಪ್ರೆಸ್ಟೀಜ್‌ ಫೇರ್‌ ಫೀಲ್ಡ್‌ ಬಳಿ ರಸ್ತೆಯಲ್ಲಿ ಸುಮಾರು ಎರಡು ಅಡಿ ನೀರು ನಿಂತಿತ್ತು. ಶಾಲೆಯಿಂದ ಮನೆಗೆ ಹೊರಟ ವಿದ್ಯಾರ್ಥಿಗಳು ರಸ್ತೆ ದಾಟಲು ಸಾಹಸ ಮಾಡಿದರು. ಸ್ಥಳೀಯರು, ಶಿಕ್ಷಕರು, ಪೋಷಕರು ರಸ್ತೆ ದಾಟಲು ಅವರಿಗೆ ನೆರವಾದರು.

ADVERTISEMENT

ಹೆಬ್ಬಾಳ ಜಂಕ್ಷನ್‌ನ ಸುತ್ತಮುತ್ತಲ ರಸ್ತೆಯಲ್ಲಿ ಎಂದಿನಂತೆ ಸೋಮವಾರ ಮಧ್ಯಾಹ್ನವೂ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಸರ್ವಿಸ್‌ ರಸ್ತೆಗಳ ತುಂಬ ನೀರು ನಿಂತು ವಾಹನ ಸವಾರರು ನೀರಿನಲ್ಲೇ ಸಾಗಲು ಪರದಾಡಿದರು.

ಹೆಣ್ಣೂರು– ಬಾಗಲೂರು ಮುಖ್ಯರಸ್ತೆ, ವಡ್ಡರಪಾಳ್ಯ ಜಂಕ್ಷನ್‌, ಯೋಗೇಶ್ವರನಗರ ಕ್ರಾಸ್‌ನಿಂದ ವೀರಣ್ಣ ಪಾಳ್ಯ, ದೇವಿನಗರದ ಅಂಡರ್‌ಪಾಸ್‌, ಸದಾಶಿವನಗರ ಪೊಲೀಸ್‌ ಠಾಣೆ, ವಿಂಡ್ಸರ್ ಮ್ಯಾನರ್‌ ರೈಲ್ವೆ ಸೇತುವೆ, ನಾಗವಾರ ಕೆಇಬಿಯಿಂದ ಹೆಣ್ಣೂರು ಕ್ರಾಸ್‌, ಸಂಜಯನಗರ ಕ್ರಾಸ್‌ನಿಂದ ವಿಮಾನ ನಿಲ್ದಾಣ, ಎಚ್‌ಆರ್‌ಬಿಆರ್‌ ಲೇಔಟ್‌, ಕಲ್ಯಾಣನಗರ, ಜಯಮಹಲ್‌ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗತಿಯಲ್ಲಿತ್ತು.

ವಿಶ್ವನಾಥ ನಾಗೇನಹಳ್ಳಿಯಲ್ಲಿ 3.5 ಸೆಂ.ಮೀ, ಕೊಡಿಗೇಹಳ್ಳಿಯಲ್ಲಿ 2.8 ಸೆಂ.ಮೀ, ಬಾಣಸವಾಡಿಯಲ್ಲಿ 1.8 ಸೆಂ.ಮೀ, ಕುಶಾಲನಗರದಲ್ಲಿ 1.7 ಹಾಗೂ ರಾಜಮಹಲ್‌ ಗುಟ್ಟಹಳ್ಳಿಯಲ್ಲಿ 1.2 ಸೆಂ.ಮೀ ಮಳೆಯಾಯಿತು.

ಮಲ್ಲೇಶ್ವರದ ಸಂಪಿಗೆ ರಸ್ತೆ ಸಮೀಪದ ನಾಗಪ್ಪ ಸ್ಟ್ರೀಟ್‌ನಲ್ಲಿ ಮರ ಉರುಳಿಬಿದ್ದಿ, ಸ್ಕೂಟಿ ವಾಹನ ಜಖಂಗೊಂಡಿತು.

ಆರ್‌ಎಂವಿ 2ನೇ ಹಂತದ ಡಾಲರ್ಸ್ ಕಾಲೊನಿಯ ರಸ್ತೆಯಲ್ಲಿ ತುಂಬಿದ್ದ ಮಳೆನೀರಿನಲ್ಲಿ ಸಂಚರಿಸಿದ ಕಾರು ಪ್ರಜಾವಾಣಿ ಚಿತ್ರ/ ಬಿ.ಕೆ. ಜನಾರ್ಧನ್
ಬೆಂಗಳೂರಿನ ಹೊರವರ್ತುಲ ರಸ್ತೆ ಸಮೀಪದ ಬಾಬುಸಾಪಾಳ್ಯದ ಸರ್ವಿಸ್ ರಸ್ತೆಯಲ್ಲಿ ಮಳೆ ನೀರಿನಲ್ಲೇ ವಾಹನ ಸವಾರರ ‘ಸಂಚಾರ ಸಾಹಸ’ ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್. ಜಿ.
ಸಂಪಿಗೆ ರಸ್ತೆ ಸಮೀಪದ ನಾಗಪ್ಪ ಸ್ಟ್ರೀಟ್‌ನಲ್ಲಿ ಸ್ಕೂಟಿ ಮೇಲೆ ಬಿದ್ದ ಮರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.