ADVERTISEMENT

ಮಳೆಯಿಂದ ಉರುಳಿ ಬಿದ್ದ ಮರಕ್ಕೆ ವಾಹನ ಗುದ್ದಿ ಹೋಟೆಲ್ ಉದ್ಯಮಿ ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 13:37 IST
Last Updated 4 ಅಕ್ಟೋಬರ್ 2021, 13:37 IST
ಬಿ.ಎಸ್. ನಾಗರಾಜ್
ಬಿ.ಎಸ್. ನಾಗರಾಜ್   

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಉರುಳಿಬಿದ್ದಿದ್ದ ತೆಂಗಿನ ಮರಕ್ಕೆ ದ್ವಿಚಕ್ರ ವಾಹನವೊಂದು ಗುದ್ದಿದ್ದು, ಸವಾರ ಬಿ.ಎಸ್. ನಾಗರಾಜ್ ಧನ್ಯ (65) ಎಂಬುವರು ಮೃತಪಟ್ಟಿದ್ದಾರೆ.

'ಟಾಟಾ ಸಿಲ್ಕ್ ಬೋರ್ಡ್ ನಿವಾಸಿ ನಾಗರಾಜ್, ಜಯನಗರದಲ್ಲಿ 'ವಾದಿರಾಜ್ ಕಾಫಿ ಬಾರ್' ಹೋಟೆಲ್ ನಡೆಸುತ್ತಿದ್ದರು. ನಿತ್ಯವೂ ನಸುಕಿನಲ್ಲಿ ಹೋಟೆಲ್‌ ಹೋಗಿ ವ್ಯಾಪಾರ ಆರಂಭಿಸುತ್ತಿದ್ದರು. ಅದರಂತೆ, ಸೋಮವಾರ ನಸುಕಿನ 4.30ರ ಸುಮಾರಿಗೆ ಮನೆಯಿಂದ ಹೋಟೆಲ್‌ಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಾಗರಾಜ್ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಗೊತ್ತಾಗಿದೆ. ನಸುಕಿನಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟ ಕಡಿಮೆ ಇತ್ತು. ರಸ್ತೆ ಖಾಲಿ ಇರಬಹುದೆಂದು ತಿಳಿದ ನಾಗರಾಜ್, ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೊರಟಿದ್ದರು.’

ADVERTISEMENT

‘ಭಾನುವಾರ ರಾತ್ರಿ ಅಬ್ಬರದ ಮಳೆ ಸುರಿದಿದ್ದರಿಂದ ಹಲವೆಡೆ ಮರಗಳು ಉರುಳಿಬಿದ್ದಿದ್ದವು. ಸೌತ್ ಆ್ಯಂಡ್ ಸರ್ಕಲ್ ಬಳಿ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಎದುರಿನ ರಸ್ತೆಯಲ್ಲಿ ನಸುಕಿನಲ್ಲಿ ತೆಂಗಿನ ಮರ ನೆಲಕ್ಕುರುಳಿತ್ತು. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಅಡ್ಡವಾಗಿ ತೆಂಗಿನ ಮರ ಬಿದ್ದಿತ್ತು’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.

‘ವೇಗವಾಗಿ ಹೊರಟಿದ್ದ ನಾಗರಾಜ್, ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ಗಮನಿಸಿರಲಿಲ್ಲ. ದ್ವಿಚಕ್ರ ವಾಹನವನ್ನು ಮರಕ್ಕೆ ಗುದ್ದಿಸಿದ್ದರು. ವಾಹನದಿಂದ ಬಿದ್ದ ನಾಗರಾಜ್ ತಲೆಗೆ ತೀವ್ರ ಪೆಟ್ಟಾಗಿ, ರಕ್ತ ಸೋರುತ್ತಿತ್ತು. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆಯೂ ಹೋಗಿತ್ತು. ಸ್ಥಳೀಯರು ಹಾಗೂ ಸಂಬಂಧಿಕರು ಸ್ಥಳಕ್ಕೆ ಬಂದು, ನಾಗರಾಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದೂ ಮಾಹಿತಿ ನೀಡಿದರು.

ಸ್ವಯಂ ಅಪಫಾತ: ‘ಬಸವನಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಅಪಘಾತ ಸಂಬಂಧ ಕುಟುಂಬದರು ದೂರು ನೀಡಿದ್ದಾರೆ. ಸ್ವಯಂ ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಬಸವನಗುಡಿ ಪೊಲೀಸರು ಹೇಳಿದರು.

ನಾಗರಾಜ್ ಅವರು ’ಕೃಷ್ಣ ವಾದಿರಾಜ್ ಟ್ರಸ್ಟ್‌’ನ ಟ್ರಸ್ಟಿ ಸಹ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.