ADVERTISEMENT

‘ಮುಂಗಾರಿಗೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಿ’

ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಪೊಲೀಸರ ಮನವಿ

​ಪ್ರಜಾವಾಣಿ ವಾರ್ತೆ
Published 29 ಮೇ 2019, 20:17 IST
Last Updated 29 ಮೇ 2019, 20:17 IST

ಬೆಂಗಳೂರು: ‘ರಾಜ್ಯಕ್ಕೆ ಸದ್ಯದಲ್ಲೇ ಮುಂಗಾರು ಪ್ರವೇಶಿಸಲಿದೆ. ಅದಕ್ಕೂ ಮುನ್ನವೇ ನಗರದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನಗರದ ಸಂಚಾರ ಪೊಲೀಸರ ಮನವಿ ಮಾಡಿದ್ದಾರೆ.

ಮುಂಗಾರಿಗೂ ಮುನ್ನ ನಗರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ಬುಧವಾರ ಅಧಿಕಾರಿಗಳ ಸಭೆ ನಡೆಸಿದರು. ಸಂಚಾರ ವಿಭಾಗದ ಡಿಸಿಪಿಗಳು, ಎಸಿಪಿಗಳು ಹಾಗೂ ಬಿಬಿಎಂಪಿ, ಬಿಎಂಆರ್‌
ಸಿಎಲ್, ಜಲಮಂಡಳಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೆಸ್ಕಾಂ, ಬಿಡಿಎ ಹಾಗೂ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ನಗರದ ಹಲವೆಡೆ ಕಾಮಗಾರಿಗಳು ನಡೆಯುತ್ತಿದ್ದು, ಸಂಚಾರಕ್ಕೆ ತೊಂದರೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಹೀಗಾಗಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ’ ಎಂದು ಹರಿಶೇಖರನ್‌, ವಿನಂತಿಸಿದರು. ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಅಪಾಯಕಾರಿ ಮರಗಳ ಗುರುತಿಸಿ: ‘ಅಪಾಯಕಾರಿ ಮರಗಳನ್ನು ಗುರುತಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೊಲೀಸರು, ‘ಪ್ರತ್ಯೇಕ ತಂಡಗಳನ್ನು ರಚಿಸಿ ನಾವೇ ಮರಗಳನ್ನು ಗುರುತಿಸುತ್ತೇವೆ’ ಎಂದು ಸಭೆಯಲ್ಲಿ ಹೇಳಿದರು.

‘ಪ್ರತಿ ವರ್ಷವೂ ಮಳೆಗಾಲದಲ್ಲಿ ನೂರಾರು ಮರಗಳು ಉರುಳಿ ಬಿದ್ದು, ಸಾವು- ನೋವುಗಳು ಸಂಭವಿಸುತ್ತಿವೆ. ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಆಯಾ ಠಾಣಾ ಅಧಿಕಾರಿಗಳೇ ತಮ್ಮ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸಿ ವರದಿ ನೀಡಬೇಕು. ಸಂಚಾರಕ್ಕೆ ಅಡ್ಡಿಯಾಗಿರುವ ಮರದ ಕೊಂಬೆಗಳನ್ನು ಕತ್ತರಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಹರಿಶೇಖರನ್‌, ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ವಾಟ್ಸ್‌ಆ್ಯಪ್‌ ಗ್ರೂಪ್ ರಚನೆ: ಮಳೆಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಾಟ್ಸ್‌ಆ್ಯಪ್‌ ಗ್ರುಪ್ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು, ಎಂಜಿನಿಯರ್‌ಗಳು, ಪೊಲೀಸ್ ಅಧಿಕಾರಿಗಳು ಗ್ರೂಪ್‌ನಲ್ಲಿ ಇರಲಿದ್ದಾರೆ. ಮಳೆ ಬರುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಕಾರ್ಯಾಚರಣೆ ಆರಂಭಿಸಲು ಗ್ರೂಪ್ ನೆರವಾಗಲಿದೆ’ ಎಂದು ಹರಿಶೇಖರನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.