ADVERTISEMENT

ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ- 13 ಜಿಲ್ಲೆಗಳಲ್ಲಿ 5 ದಿನ ‘ಯೆಲ್ಲೊ ಅಲರ್ಟ್‌’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 5:21 IST
Last Updated 20 ಅಕ್ಟೋಬರ್ 2021, 5:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅ.20ರಿಂದ 24ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರಿನ ಪ್ರಭಾವ ತಗ್ಗಿರುವುದರಿಂದ ರಾಜ್ಯದಾದ್ಯಂತ ಮಳೆ ನಿಂತಿತ್ತು. ಇದೇ 21ರಿಂದ ಮತ್ತೆಮಳೆ ಹೆಚ್ಚಾಗುವ ಹಾಗೂ ಹಿಂಗಾರು ಪ್ರವೇಶಿಸುವ ಲಕ್ಷಣಗಳು ಇರುವುದಾಗಿ ಇಲಾಖೆ ಮಾಹಿತಿ ನೀಡಿತ್ತು. ಆದರೆ, ದಕ್ಷಿಣ ಒಳನಾಡಿನಲ್ಲಿ ಅ.20ರಿಂದಲೇ ಮಳೆ ಹೆಚ್ಚಾಗುವ ಮುನ್ಸೂಚನೆಗಳು ಕಂಡುಬಂದಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇದೇ 24ರವರೆಗೂ ಹೆಚ್ಚು ಮಳೆಯಾಗುವ ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ADVERTISEMENT

ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅ.22ರಿಂದ ಮಳೆ ಹೆಚ್ಚಾಗಲಿದೆ.

ಮಳೆ–ಎಲ್ಲಿ, ಎಷ್ಟು?: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಂಗಳವಾರ 4 ಸೆಂ.ಮೀ ಮಳೆಯಾಗಿದೆ. ಮದ್ದೂರು 3, ಬೆಂಗಳೂರು ಹಾಗೂ ರಾಮನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕಾರವಾರದಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಬೀದರ್‌ನಲ್ಲಿ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.