ADVERTISEMENT

ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಜಾಗೃತಿ ಮೂಡಿಸಲು ಹಕ್ಕೊತ್ತಾಯ

‘ಒಂದೆಡೆ’ ಸಂಸ್ಥೆ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 17 ಮೇ 2025, 22:53 IST
Last Updated 17 ಮೇ 2025, 22:53 IST
ಶನಿವಾರ ಇಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಸಭೆಯಲ್ಲಿ ಭಿತ್ತಿಪತ್ರವನ್ನು ಬಿಡುಗಡೆ  ಮಾಡಲಾಯಿತು. ಅಕ್ಕೈ ಪದ್ಮಶಾಲಿ, ಭಾಗ್ಯಲಕ್ಷ್ಮಿ, ಎಲ್.ಎನ್. ಮುಕುಂದರಾಜ್, ಡಾ. ಅಲಿಕ್ವಾಜ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಶನಿವಾರ ಇಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಸಭೆಯಲ್ಲಿ ಭಿತ್ತಿಪತ್ರವನ್ನು ಬಿಡುಗಡೆ  ಮಾಡಲಾಯಿತು. ಅಕ್ಕೈ ಪದ್ಮಶಾಲಿ, ಭಾಗ್ಯಲಕ್ಷ್ಮಿ, ಎಲ್.ಎನ್. ಮುಕುಂದರಾಜ್, ಡಾ. ಅಲಿಕ್ವಾಜ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ಪೊಲೀಸ್‌ ಮತ್ತು ಕೌಟುಂಬಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಕಾನೂನು ರೂಪಿಸಬೇಕು. ಶೈಕ್ಷಣಿಕ ತಾರತಮ್ಯವನ್ನು ನಿವಾರಿಸಬೇಕು. ಸಾರ್ವಜನಿಕರಲ್ಲಿ ನಮ್ಮ ಸಮುದಾಯದ ಕುರಿತು ಜಾಗೃತಿ ಮೂಡಿಸಬೇಕು. .  .

ಇವು ‘ಒಂದೆಡೆ ಸಂಸ್ಥೆ’ ಶನಿವಾರ ಆಯೋಜಿಸಿದ್ದ ಅಂತರ್ಲಿಂಗಿ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರಸ್ತುತ ಸ್ಥಿತಿಗತಿಗಳು, ಸವಾಲುಗಳು ಮತ್ತು ಪರಿಹಾರಗಳು’ ಎಂಬ ಸಾರ್ವಜನಿಕ ಸಭೆಯಲ್ಲಿ ಮಂಡಿಸಿದ ಹಕ್ಕೊತ್ತಾಯಗಳು.

‘ಹೆಣ್ಣಾದರೂ ಹೆಣ್ಣಲ್ಲದ, ಗಂಡಾದರೂ ಗಂಡಲ್ಲದ, ಅವನೊಳಗಿನ ಅವಳು, ಅವಳೊಳಗಿನ ಅವನನ್ನು ಹೊರತರುವ ಯತ್ನದಲ್ಲಿ ಲೋಕನಿಂದಿತರಾದವರು ಲಿಂಗತ್ವ ಅಲ್ಪಸಂಖ್ಯಾತರು. ನಮ್ಮಲ್ಲಿ ಮೂಡುವ ಇಂತಹ ಭಾವನೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಲಿಂಗತ್ವ ಅಲ್ಪಸಂಖ್ಯಾತರಾಗಿ ಬದಲಾಗಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರಿಗೆ ಕೌನ್ಸಿಲಿಂಗ್‌ ಮಾಡಬೇಕು. ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರಿಗೆ ತರಬೇತಿ ನೀಡಬೇಕು’ ಎಂದು ಐಟಿ ಕಂಪನಿಯ ಉದ್ಯೋಗಿ ಪೃಥ್ವಿ ಒತ್ತಾಯಿಸಿದರು.

ADVERTISEMENT

‘ಶೈಕ್ಷಣಿಕ ರಂಗದಲ್ಲಿ ಆಗುತ್ತಿರುವ ತಾರತಮ್ಯಗಳನ್ನು ನಿವಾರಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂಲಸೌಲಭ್ಯಗಳನ್ನು ಒದಗಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂದು ಸಮುದಾಯದ ಸಹನಾ ಮತ್ತು ಚಿನ್ನು ಮನವಿ ಮಾಡಿದರು.

‘ಪೊಲೀಸ್‌ ಎಂಬ ಶಬ್ದ ಕೇಳಿದರೆ ಸಾಕು ನಮ್ಮ ಸಮುದಾಯದವರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ನಾವು ಯಾವುದೇ ಕೆಲಸಗಳನ್ನು ಮಾಡಿದರೂ ಪೊಲೀಸರು ಅದಕ್ಕೆ ಅಡ್ಡಿಪಡಿಸುತ್ತಾರೆ. ನಮ್ಮನ್ನು ರಕ್ಷಿಸಬೇಕಾದವರೇ ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೆ, ನಾವು ಯಾರ ಬಳಿ ನ್ಯಾಯ ಕೇಳಬೇಕು’ ಎಂದು ಮೋನಿಕಾ ಪ್ರಶ್ನಿಸಿದರು. 

‘ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಸಮುದಾಯಕ್ಕೆ ಸರಿಯಾಗಿ ತಲುಪುತ್ತಿಲ್ಲ’ ಎಂದು ಸಮೀರ್ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಸಿವಿಲ್ ನ್ಯಾಯಾಲಯದ ಹಿರಿಯ ಸರ್ಕಾರಿ ಅಭಿಯೋಜಕಿ ಭಾಗ್ಯಲಕ್ಷ್ಮಿ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳಬೇಕು. ನಮ್ಮ ಸಂವಿಧಾನದಲ್ಲಿರುವ ಕಾಯ್ದೆ, ಕಾನೂನುಗಳ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಇದರಿಂದ ನಮ್ಮ ಮೇಲೆ ಆಗುವ ದೌರ್ಜನ್ಯಗಳನ್ನು ಪ್ರಶ್ನಿಸಲು ಸಹಾಯಕವಾಗುತ್ತದೆ. ಸಮುದಾಯ ಪರವಾಗಿ ಕಾರ್ಯನಿರ್ವಹಿಸುವ ಕಾನೂನು ಸಲಹಾ ಸಮಿತಿಯನ್ನು ರಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿದರು. ಬಂಜಾರ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ. ಅಲಿಕ್ವಾಜ್, ಲಿಂಗತ್ವ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.