ADVERTISEMENT

ಸ್ನೇಹಿತನ ಕೊಲೆ: ಆರೋಪಿ ಕಾಲಿಗೆ ಗುಂಡೇಟು

* ಆಶ್ರಯ ನೀಡಿದ್ದ ಸ್ನೇಹಿತನನ್ನೇ ಕೊಂದಿದ್ದ ಕಿಶೋರ್ * ಮತ್ತೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್

​ಪ್ರಜಾವಾಣಿ ವಾರ್ತೆ
Published 26 ಮೇ 2019, 19:17 IST
Last Updated 26 ಮೇ 2019, 19:17 IST
ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಕಿಶೋರ್ 
ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಕಿಶೋರ್    

ಬೆಂಗಳೂರು: ಕೆಲಸ ಹುಡುಕಿಕೊಂಡು ನಗರಕ್ಕೆ ಬಂದ ವೇಳೆ ಆಶ್ರಯ ನೀಡಿದ್ದ ಸ್ನೇಹಿತನನ್ನೇ ನಾಲ್ವರು ಸಹಚರರ ಜೊತೆ ಸೇರಿ ಕೊಲೆ ಮಾಡಿದ್ದ ಆರೋಪಿ ಕಿಶೋರ್ ಎಂಬಾತನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

‘ಹೆಗ್ಗನಹಳ್ಳಿಯಲ್ಲಿ ‘ಕಬಾಬ್ ಹಾಗೂ ಎಗ್‌ ರೈಸ್’ ಅಂಗಡಿ ನಡೆಸುತ್ತಿದ್ದ ಉಮೇಶ್ (36) ಎಂಬುವರನ್ನು ಮೇ 12ರಂದು ಕೊಲೆ ಮಾಡಿದ್ದ ಕಿಶೋರ್, ಅಂದಿನಿಂದಲೇ ತಲೆಮರೆಸಿಕೊಂಡು ಓಡಾಡುತ್ತಿದ್ದ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದ ಆತನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ದಿನೇಶ್ ಪಾಟೀಲ, ಆತನ ಬಲ ಕಾಲಿಗೆ ಗುಂಡು ಹೊಡೆದಿದ್ದಾರೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಂದ ಹಲ್ಲೆಗೀಡಾದ ಹೆಡ್ ಕಾನ್‌ಸ್ಟೆಬಲ್ ಶಿವಸ್ವಾಮಿ ಅವರು ಮಾರುತಿ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದರು: ಕಿಶೋರ್ ಹಾಗೂ ಆತನ ನಾಲ್ವರು ಸಹಚರರು ಮೇ 12ರಂದು ರಾತ್ರಿ ಅಂಗಡಿಗೆ ನುಗ್ಗಿಉಮೇಶ್‌ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆ ಪ್ರಕರಣದಲ್ಲಿ ಹೆಗ್ಗನಹಳ್ಳಿಯ ರವೀಶ್ ಅಲಿಯಾಸ್ ರವಿ, ಜಿತೇಂದ್ರ ಅಲಿಯಾಸ್ ಜೀತು, ಅಂದ್ರಹಳ್ಳಿಯ ಸುಮಂತ್ ರಾಜ್ ಹಾಗೂ ಪ್ರದೀಪ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಕಿಶೋರ್‌ನ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಆತನನ್ನು ಭಾನುವಾರ ಬೆಳಿಗ್ಗೆ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಸೆರೆಹಿಡಿದಿದ್ದಾರೆ.

‘ಆರೋಪಿ ಕಿಶೋರ್, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಾಹಿತಿ ಬಂದಿತ್ತು. ದಿನೇಶ್ ಪಾಟೀಲ ನೇತೃತ್ವದ ತಂಡ ಸ್ಥಳಕ್ಕೆ ಹೋಗಿ ಆತನ ವಾಹನ ಅಡ್ಡಗಟ್ಟಿದ್ದರು. ಅವರಿಂದ ತಪ್ಪಿಸಿಕೊಂಡಿದ್ದ ಆತ, ಮಾರ್ಗಮಧ್ಯೆ ವಾಹನವನ್ನು ಬಿಟ್ಟು ಓಡಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಕಿಶೋರ್‌ನನ್ನು ಬೆನ್ನಟ್ಟಿದ್ದಹೆಡ್ ಕಾನ್‌ಸ್ಟೆಬಲ್ ಶಿವಸ್ವಾಮಿ, ಹಿಡಿದುಕೊಳ್ಳಲು ಮುಂದಾಗಿದ್ದರು. ಅವರ ಮೇಲೆಯೇ ಆತ ಹಲ್ಲೆ ಮಾಡಿದ್ದ. ಪಾಟೀಲ ಅವರು ಆರೋಪಿಗೆ ಪಿಸ್ತೂಲ್ ತೋರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಆದರೆ, ಆತ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದ. ಆಗ ಗುಂಡು ಹಾರಿಸಿದ್ದರು’ ಎಂದು ವಿವರಿಸಿದರು.

ಜೀವ ಬೆದರಿಕೆ ಕರೆ: ‘ಮೇ 24ರಂದು ಉಮೇಶ್‌ ಅವರ ಪತ್ನಿಯ ಸಹೋದರನಿಗೆ ಕರೆ ಮಾಡಿದ್ದ ಕಿಶೋರ್, ‘ಹುಷಾರಾಗಿ ಇರಿ. ಇಲ್ಲದಿದ್ದರೆ, ಉಮೇಶ್‌ನಿಗೆ ಬಂದ ಗತಿ ನಿಮಗೂ ಬರುತ್ತದೆ. ಆ ಸಂತೋಷ್‌ನಿಗೂ (ಪತ್ನಿಯ ಪರಿಚಯಸ್ಥ) ಹುಷಾರಾಗಿ ಇರಲು ಹೇಳಿ’ ಎಂದು ಜೀವ ಬೆದರಿಕೆ ಹಾಕಿದ್ದ’ ಎಂದು ರಾಜಗೋಪಾಲನಗರ ಪೊಲೀಸರು ಹೇಳಿದರು.

ಧರ್ಮಸ್ಥಳದಲ್ಲಿದ್ದ ಆರೋಪಿ

‘ಕೊಲೆ ಬಳಿಕ ಧರ್ಮಸ್ಥಳಕ್ಕೆ ಹೋಗಿದ್ದ ಆರೋಪಿ, ಕೆಲದಿನಗಳವರೆಗೆ ಅಲ್ಲಿಯೇ ಉಳಿದುಕೊಂಡಿದ್ದ. ಸಿಮ್ ಕಾರ್ಡ್‌ ಬದಲಾಯಿಸಿದ್ದರಿಂದ ಆತ ಎಲ್ಲಿದ್ದಾನೆ ಎಂಬುದು ಗೊತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಮೇ 24ರಂದು ನಗರಕ್ಕೆ ಬಂದಿದ್ದ ಆತ, ಜೀವ ಬೆದರಿಕೆ ಕರೆ ಮಾಡಿದ್ದ. ಅದೇ ಸುಳಿವು ಆಧರಿಸಿ ಆತನಿರುವ ಜಾಗವನ್ನು ಪತ್ತೆ ಮಾಡಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.