ADVERTISEMENT

ಇಂಡಿಗೊ ವಿಮಾನ: ತುರ್ತು ಲ್ಯಾಂಡಿಂಗ್‌ಗಾಗಿ ₹5 ಸಾವಿರ ಕೇಳಿದ ಸಿಬ್ಬಂದಿ –ಆರೋಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 2:14 IST
Last Updated 15 ಡಿಸೆಂಬರ್ 2021, 2:14 IST
ಇಂಡಿಗೊ ವಿಮಾನ
ಇಂಡಿಗೊ ವಿಮಾನ   

ದೇವನಹಳ್ಳಿ: ರಾಜಮಂಡ್ರಿಯಿಂದ ತಿರುಪತಿಯತ್ತ ಹೊರಟಿದ್ದ ಇಂಡಿಗೊ ವಿಮಾನವನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತುರ್ತು ಲ್ಯಾಂಡಿಂಗ್ ಮಾಡಲಾಗಿದ್ದು, ಇದೇ ಸಂದರ್ಭದಲ್ಲೇ ಸಿಬ್ಬಂದಿ ₹ 5 ಸಾವಿರ ಕೇಳಿದ್ದಾರೆಂದು ಪ್ರಯಾಣಿಕರು ಆರೋಪಿಸಿದ್ದಾರೆ.

ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ನಾಯಕಿಯೂ ಆಗಿರುವ ನಟಿ ರೋಜಾ ಸೇರಿದಂತೆ 50ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದಲ್ಲಿದ್ದರು.

ಆಂಧ್ರಪ್ರದೇಶದ ರಾಜಮಂಡ್ರಿ ನಿಲ್ದಾಣದಲ್ಲಿ ಟೇಕಾಫ್‌ ಆಗಿದ್ದ ವಿಮಾನ ಬೆಳಿಗ್ಗೆ 10.30ಕ್ಕೆ ತಿರುಪತಿ ತಲುಪಬೇಕಿತ್ತು. ಆದರೆ, ಮಾರ್ಗಮಧ್ಯೆಯೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಬೆಂಗಳೂರಿನ ನಿಲ್ದಾಣದಲ್ಲಿ ಇಳಿಸಲಾಯಿತು.

ADVERTISEMENT

ಪ್ರಯಾಣಿಕರನ್ನು ವಿಮಾನದಲ್ಲೇ ನಾಲ್ಕು ಗಂಟೆ ಕೂರಿಸಲಾಗಿತ್ತು. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು. ಕೆಲ ಸಿಬ್ಬಂದಿ, ನಿಲ್ದಾಣದ ಭದ್ರತಾ ಶುಲ್ಕವೆಂದು ₹ 5 ಸಾವಿರಕ್ಕೆ ಬೇಡಿಕೆ ಇರಿಸಿದ್ದರು. ಇದನ್ನು ಹಲವು ಪ್ರಯಾಣಿಕರು ಖಂಡಿಸಿದರು.

ಈ ಬಗ್ಗೆ ವಿಡಿಯೊ ಹರಿಬಿಟ್ಟಿರುವ ನಟಿ ರೋಜಾ, ‘ವಿಮಾನದಲ್ಲೇ ಪ್ರಯಾಣಿಕರನ್ನು ಕೂರಿಸಿದ್ದ ಸಿಬ್ಬಂದಿ, ಯಾವುದೇ ಸೌಲಭ್ಯ ನೀಡಲಿಲ್ಲ. ಭದ್ರತೆ ನೆಪದಲ್ಲಿ ₹ 5 ಸಾವಿರ ಹಣಕ್ಕೆ ಸಿಬ್ಬಂದಿ ಬೇಡಿಕೆ ಇರಿಸಿದ್ದರು. ಇದರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ’ ಎಂದಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.