ADVERTISEMENT

ಕಾರ್ಡ್‌ ರಸ್ತೆ ಮೇಲ್ಸೇತುವೆ ಉದ್ಘಾಟನೆಗೆ ಸಿದ್ಧ

ಬಸವೇಶ್ವರನಗರ ಜಂಕ್ಷನ್ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 18:48 IST
Last Updated 27 ಸೆಪ್ಟೆಂಬರ್ 2021, 18:48 IST
ಕಾರ್ಡ್‌ ರಸ್ತೆಯಲ್ಲಿ ಶಿವನಗರದ ವೃತ್ತದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿರುವುದು
ಕಾರ್ಡ್‌ ರಸ್ತೆಯಲ್ಲಿ ಶಿವನಗರದ ವೃತ್ತದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿರುವುದು   

ಬೆಂಗಳೂರು: ರಾಜಾಜಿನಗರದ ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಶಿವನಗರ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ಕಾಮಗಾರಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೋಮವಾರ ಪರಿಶೀಲಿಸಿದರು.

ಶಿವನಗರ 1ನೇ ಮುಖ್ಯರಸ್ತೆ ಮತ್ತು 8ನೇ ಮುಖ್ಯ ರಸ್ತೆಯಲ್ಲಿ 655 ಮೀಟರ್ ಉದ್ದದ ಮೇಲ್ಸೇತುವೆಯನ್ನು ₹71.98 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೇಲುಸೇತುವೆಯಲ್ಲಿ 7.5 ಮೀಟರ್ ಉದ್ದದ 4 ಪಥಗಳಿವೆ. ಬಹುತೇಕ ಡಾಂಬರೀಕರಣ ಕಾಮಗಾರಿ ಮುಗಿದಿದ್ದು, ರ‍್ಯಾಂಪ್ ಬಳಿ ಮಾತ್ರ ಡಾಂಬರು ಕಾಮಗಾರಿ ನಡೆಯಬೇಕಿದೆ.

ಬೀದಿ ದೀಪ ಅಳವಡಿಕೆ, ಸೇತುವೆ ಮೇಲೆ ಮತ್ತು ಕೆಳಗೆ ಸಸಿ ನೆಡುವ ಕಾಮಗಾರಿ ಬಾಕಿ ಇದೆ. ಅವೆಲ್ಲವನ್ನೂ ಕೂಡಲೇ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಬಸವೇಶ್ವರನಗರ ಜಂಕ್ಷನ್ ಹಾಗೂ 72ನೇ ಕ್ರಾಸ್ ರಾಜಾಜಿನಗರ ಮೇಲುಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನೂ ತ್ವರಿತವಾಗಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

ರಾಜಾಜಿನಗರದ ಪೇರೆಂಟ್ಸ್ ಶಾಲೆ ಹತ್ತಿರದ ಪಾಲಿಕೆಯ ಆಟದ ಮೈದಾನ ₹2 ಕೊಟಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದು, ವೀಕ್ಷಕ ಗ್ಯಾಲರಿ, ಮೈದಾನದ ಸುತ್ತಲೂ ಗೋಡೆ ನಿರ್ಮಾಣ ಕಾಮಗಾರಿ ಮುಗಿದಿದೆ. ಬಾಕಿ ಕಾಮಗಾರಿಗೆ ₹2.50 ಕೋಟಿ ಹೆಚ್ಚುವರಿ ಅನುದಾನ ಅವಶಕ್ಯತೆ ಇದ್ದು, ಬಿಡುಗಡೆ ಮಾಡುವಂತೆ ಆಯುಕ್ತರಿಗೆ ಶಾಸಕ ಎಸ್.ಸುರೇಶ್‌ಕುಮಾರ್ ಮನವಿ ಮಾಡಿದರು.

ಹಾವನೂರು ವೃತ್ತದಿಂದ ಶಂಕರಮಠ ವೃತ್ತದವರೆಗಿನ ರಸ್ತೆ ಹದಗೆಟ್ಟಿದ್ದು, ಕೂಡಲೇ ಡಾಂಬರು ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಂಕರಮಠ ವೃತ್ತದ ಬಳಿ ಬಸವೇಶ್ವರನಗರ ಕಡೆ ದೊಡ್ಡ ವಾಹನಗಳ ತಿರುವಿಗೆ ಕಷ್ಟವಾಗುತ್ತಿದ್ದು, ವಾಹನಗಳ ಸುಗಮ ತಿರುವಿಗೆ ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ರಾಜಾಜಿನಗರ 19ನೇ ಮುಖ್ಯರಸ್ತೆಯಲ್ಲಿ ವಾರ್ಡ್ ಅನುದಾನದಲ್ಲಿ ವಿವಿದ್ದೋದ್ದೇಶ ಕಟ್ಟಡ ನಿರ್ಮಾಣವಾಗುತ್ತಿದ್ದು, ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಶಾಸಕರ ಅನುದಾನದಿಂದ ₹3.50 ಕೋಟಿ ನೀಡಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೌರವ್ ಗುಪ್ತ ವಿವರಿಸಿದರು.

ದಯಾನಂದನಗರ ವಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಿವಿಧೋದ್ದೇಶ ಕಟ್ಟಡ ಕಾಮಗಾರಿಯನ್ನೂ ಆಯುಕ್ತರು ಪರಿಶೀಲಿಸಿದರು. ಇದಕ್ಕೂ ಶಾಸಕರ ನಿಧಿಯಿಂದ ₹3 ಕೋಟಿ ಅನುದಾನ ದೊರೆತಿದೆ ಎಂದರು.

ವಲಯ ಜಂಟಿ ಆಯುಕ್ತ ಶಿವಸ್ವಾಮಿ, ಮುಖ್ಯ ಎಂಜಿನಿಯರ್ (ಯೋಜನೆ) ಲೋಕೇಶ್, ವಲಯ ಮುಖ್ಯ ಎಂಜಿನಿಯರ್ ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.