ADVERTISEMENT

ಆಕರ್ಷಣೆಯ ಕೇಂದ್ರವಾಗಿ ಜಿ.ಪಿ. ಪಾರ್ಕ್‌ ಅಭಿವೃದ್ಧಿ: ಮುನಿರತ್ನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 3:11 IST
Last Updated 24 ಡಿಸೆಂಬರ್ 2020, 3:11 IST
ಜೆ.ಪಿ. ಪಾರ್ಕ್‍ನಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಯ ನೀಲನಕ್ಷೆಯನ್ನು ಶಾಸಕ ಮುನಿರತ್ನ ಪರಿಶೀಲಿಸಿದರು. ಅಧಿಕಾರಿಗಳು ಇದ್ದಾರೆ
ಜೆ.ಪಿ. ಪಾರ್ಕ್‍ನಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಯ ನೀಲನಕ್ಷೆಯನ್ನು ಶಾಸಕ ಮುನಿರತ್ನ ಪರಿಶೀಲಿಸಿದರು. ಅಧಿಕಾರಿಗಳು ಇದ್ದಾರೆ   

ರಾಜರಾಜೇಶ್ವರಿನಗರ: ‘ಬೆಂಗಳೂರಿಗೆ ಕಳಶಪ್ರಾಯದಂತಿರುವ ಲಾಲ್‍ಬಾಗ್, ಕಬ್ಬನ್‍ ಉದ್ಯಾನದ ಮಾದರಿಯಂತೆಯೇ ಜೆ.ಪಿ. ಪಾರ್ಕ್‍ ಅನ್ನು ರಾಷ್ಟ್ರೀಯ ಆಕರ್ಷಣೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡಿ ದೇಶದ, ರಾಜ್ಯದ ಮೂಲೆಮೂಲೆಗಳಿಂದ ಪ್ರವಾಸಿಗರು ಉದ್ಯಾನದ ಕಡೆಗೆ ಆಕರ್ಷಿತರಾಗುವಂತೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಶಾಸಕ ಮುನಿರತ್ನ ವಿವರಿಸಿದರು.

ಜೆ.ಪಿ. ಪಾರ್ಕ್‍ನಲ್ಲಿ ₹19 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಕಾಮಗಾರಿಯ ನೀಲನಕ್ಷೆ ಪರಿಶೀಲನೆ ನಡೆಸಿದ ಅವರು, ‘80 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಹರಡಿಕೊಂಡಿರುವ ಜೆ.ಪಿ.ಪಾರ್ಕ್‍ನ್ನು ಅಭಿವೃದ್ಧಿಗೊಳಿಸಿ ರೈಲ್ವೆ ಟ್ರ್ಯಾಕ್, ಕಲ್ಯಾಣಿ ನಿರ್ಮಾಣ ಮಾಡಲಾಗುವುದು. ಬೆಂಗಳೂರು ನಿರ್ಮಾಣಕ್ಕೆ ಪ್ರಮುಖ ಕಾರಣರಾದ ಕೃಷ್ಣರಾಜೇಂದ್ರ ಒಡೆಯರ್, ಮಾಗಡಿ ಕೆಂಪೇಗೌಡ, ವಿದ್ವಾಂಸರ, ಕವಿಗಳ, ಪ್ರಸಿದ್ಧ ಕಲಾವಿದರ ಹಾಗೂ ಪ್ರಾಣಿಗಳ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು’ ಎಂದರು.

‘ಮರಳು ಮೇಲೆ ನಡಿಗೆ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾದ ಬಯಲು ವ್ಯಾಯಾಮ ಶಾಲೆ ನಿರ್ಮಿಸಲಾಗುವುದು. ಪಕ್ಷಿಗಳಿಗೆ ಅನುಕೂಲವಾಗುವ ರೀತಿ ಹಣ್ಣು ಬಿಡುವ ವಿವಿಧ ಜಾತಿಯ ಮರಗಳನ್ನು ಬೆಳೆಸಿ ಪೋಷಿಸಲಾಗುವುದು’ ಎಂದರು.

ADVERTISEMENT

ಬಿಬಿಎಂಪಿ ಮುಖ್ಯ ಎಂಜಿನಿಯರ್ ವಿಜಯ್‍ಕುಮಾರ್, ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜು, ತೋಟಗಾರಿಕೆ ಅಧೀಕ್ಷಕಿ ವಿಜಯಲಕ್ಷ್ಮಿ ಸಂಗನಾಳ್, ಜಿ.ಕೆ.ವೆಂಕಟೇಶ್, ಮುಖಂಡ ರಾಮಕೃಷ್ಣರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.