ರಾಜರಾಜೇಶ್ವರಿನಗರ: ಜ್ಞಾನಭಾರತಿ ವಾರ್ಡ್‌ನಲ್ಲಿ ಅರಣ್ಯ ನೌಕರರ ಬಡಾವಣೆಗೆ ಹಾದು-ಹೋಗುವ ರಸ್ತೆಯ ಎಡಭಾಗದಲ್ಲಿರುವ ಮರಗಳ ಬುಡಗಳಿಗೆ ಯಾರೋ ದುಷ್ಕರ್ಮಿಗಳು ಕಸ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಮರಗಳ ಬುಡಗಳಿಗೆ ಹಾನಿಯಾಗುತ್ತಿದೆ.
ಕೆಲವು ದಿನಗಳ ಹಿಂದೆ ರಸ್ತೆಯ ಬಲಭಾಗದಲ್ಲಿಯೂ ಇದೇ ರೀತಿ ತಾಜ್ಯವನ್ನು ಸುರಿದು ಬೆಂಕಿ ಹಚ್ಚಲಾಗಿತ್ತು. ಇದರಿಂದ ಕೆಲವು ಮರಗಳು ಸುಟ್ಟುಹೋಗಿದ್ದವು. ಆದರೂ ಬಿಬಿಎಂಪಿಯ ಅರಣ್ಯ ವಿಭಾಗದವರು ಇತ್ತ ಕಡೆ ಗಮನ ಹರಿಸಲಿಲ್ಲ ಎಂದು ಅರಣ್ಯ ನೌಕರರ ಬಡಾವಣೆ, ಭೈರವನಗರ ದುಬಾಸಿಪಾಳ್ಯ, ಉಪಾಧ್ಯಾಯ ಬಡಾವಣೆಗಳ ನಿವಾಸಿಗಳು ದೂರಿದರು.
ರಸ್ತೆಯ ಎಡಭಾಗದಲ್ಲಿ ರೈಲ್ವೆ ಹಳಿ ಹಾದು ಹೋಗಿದೆ. ಇದಕ್ಕೆ ಹೊಂದಿಕೊಂಡಂತೆ ಎತ್ತರಕ್ಕೆ ಬೆಳೆದಿರುವ ನೂರಾರು ಮರಗಳಿವೆ. ಈ ಮರಗಳ ಬುಡಕ್ಕೂ ತ್ಯಾಜ್ಯವನ್ನು ಸುರಿದು ಬೆಂಕಿ ಹಾಕುತ್ತಿದ್ದಾರೆ. ಬಿಬಿಎಂಪಿಯಾಗಲಿ, ರೈಲ್ವೆ ಇಲಾಖೆಯವರಾಗಲಿ ಮರಗಳ ರಕ್ಷಣೆ ಮಾಡುತ್ತಿಲ್ಲ ಎಂದು ಸ್ಥಳಿಯರು ಬೇಸರ ವ್ಯಕ್ತಪಡಿಸಿದರು.
‘ಬೆಂಗಳೂರನ್ನು ಹಸಿರು ನಗರವನ್ನಾಗಿಸುತ್ತೇವೆ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಸಚಿವರು, ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಮರಗಳ ರಕ್ಷಣೆಗೆ ಮುಂದಾಗುತ್ತಿಲ್ಲ’ ಎಂದು ದೂರಿದರು.
ಮರಗಳ ರಕ್ಷಣೆ ಮತ್ತು ಅಭಿವೃದ್ದಿಗಾಗಿ ಬಿಬಿಎಂಪಿಯಲ್ಲಿ ಪ್ರತ್ಯೇಕ ಅರಣ್ಯವಿಭಾಗವಿದೆ. ಮನೆ ನಿರ್ಮಾಣ, ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕರು ಅಗತ್ಯವಿಲ್ಲದಿದ್ದರೂ ಮರಗಳನ್ನು ಕಡಿಯುತ್ತಿದ್ದಾರೆ. ಇಷ್ಟಾದರೂ ಬಿಬಿಎಂಪಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರಾದ ಕೃಷ್ಣಪ್ಪ, ಸತೀಶ್ ಅವರು ಬೇಸರದಿಂದ ಹೇಳಿದರು.
ಬಿಡಿಎ, ಬಿಬಿಎಂಪಿ, ಖಾಸಗಿ ಬಡಾವಣೆ ನಿರ್ಮಾಣ ಸಮಯದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಆದರೆ, ಈ ಬಡಾವಣೆಗಳಲ್ಲಿ ಮನೆ, ಕಟ್ಟಡ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವರು ಮರಗಳನ್ನು ನೆಲಸಮಮಾಡುತ್ತಿದ್ದಾರೆ. ಅವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.