ADVERTISEMENT

‘ನಾನು ಕುಂಟ: ಆದರೆ, ನನ್ನ ಕೈಬೆರಳು ಓಡ್ತದೆ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 19:57 IST
Last Updated 16 ಮಾರ್ಚ್ 2019, 19:57 IST
ಪಂಡಿತ್ ರಾಜೀವ ತಾರಾನಾಥ ಅವರನ್ನು ಗೌರವಿಸಲಾಯಿತು.(ಎಡದಿಂದ) ಉಪನ್ಯಾಸಕಿ ವನಮಾಲಾ ವಿಶ್ವನಾಥ್, ಉಸ್ತಾದ್ ಫಯಾಜ್ ಖಾನ್, ಸಿ.ಚಂದ್ರಶೇಖರ್, ಐ.ಎಂ.ವಿಠ್ಠಲಮೂರ್ತಿ, ಗಾಯಕಿ ರಮಾ ಪುಸ್ತಕಂ ಮತ್ತು ಗಾಯಕ ಪರಮೇಶ್ವರ ಹೆಗಡೆ ಇದ್ದಾರೆ--- – ಪ್ರಜಾವಾಣಿ ಚಿತ್ರ
ಪಂಡಿತ್ ರಾಜೀವ ತಾರಾನಾಥ ಅವರನ್ನು ಗೌರವಿಸಲಾಯಿತು.(ಎಡದಿಂದ) ಉಪನ್ಯಾಸಕಿ ವನಮಾಲಾ ವಿಶ್ವನಾಥ್, ಉಸ್ತಾದ್ ಫಯಾಜ್ ಖಾನ್, ಸಿ.ಚಂದ್ರಶೇಖರ್, ಐ.ಎಂ.ವಿಠ್ಠಲಮೂರ್ತಿ, ಗಾಯಕಿ ರಮಾ ಪುಸ್ತಕಂ ಮತ್ತು ಗಾಯಕ ಪರಮೇಶ್ವರ ಹೆಗಡೆ ಇದ್ದಾರೆ--- – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾನು ನಡೆಯಲಾಗದ ಕುಂಟ. ಆದರೆ ನನ್ನ ಕೈಬೆರಳು ಓಡ್ತದೆ. ಈಗಲೂ ಬೇಕಿದ್ದರೆ ಎಂಟು ತಾಸು ಸರೋದ್ ನುಡಿಸಬಲ್ಲೆ,ಎರಡು ಇಂಟರ್‌ವೆಲ್ ಕೊಡಿ ಸಾಕು...’ 86ರ ಇಳಿ ವಯಸ್ಸಿನ ಪಂಡಿತ್ ರಾಜೀವ ತಾರಾನಾಥ ಅವರು ಹೀಗೆ ನುಡಿದಾಗ ರವೀಂದ್ರ ಕಲಾಕ್ಷೇತ್ರದಲ್ಲಿ ಜೋರು ಕರತಾಡನ!

ಪಂಡಿತ್ ಪರಮೇಶ್ವರ ಹೆಗಡೆ, ಸಂಗೀತ ಸಂಭ್ರಮ ಮತ್ತು ಸಾಹಿತಿ, ಕಲಾವಿದರ ವೇದಿಕೆ ಜೊತೆಯಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮನತುಂಬಿ ಮಾತನಾಡಿದರು.

‘ನನ್ನದು ಅತೃಪ್ತ ಜೀವ. ಇವತ್ತು ನನಗೆ ತೃಪ್ತಿ ಸಿಗಲಿಲ್ಲ ಎಂದೇ ನಾನು ನಾಳೆಯನ್ನು ಕಾಯುತ್ತೇನೆ. ನನ್ನ ಮಗನ ಹೆಸರೇ ಎಷ್ಟೋ ಸಲ ನನಗೆ ನೆನಪಿರುವುದಿಲ್ಲ. ಆದರೆ ನೆನಪಿಸಿಕೊಂಡರೆ ಯಮನ್ ರಾಗ ಬೆರಳಿಗೆ ಬರುತ್ತದೆ. ಅದಕ್ಕೆ ಕಾರಣ ನನ್ನ ಗುರುಗಳಾದ ಅಲಿ ಅಕ್ಬರ್ ಖಾನ್ ಎಂಬ ದೇವತೆ’ ಎಂದು ಹೇಳಿದರು.

ADVERTISEMENT

‘ನಮಗಿಂತ ದೊಡ್ಡ ಯಾವುದೋ ಒಂದು ಶಕ್ತಿ ಇದೆ. ಅದರಿಂದ ನಾವು ಶಕ್ತಿಯನ್ನು ಪಡೆಯುವುದೇ ಇಬಾದತ್. ಅದರ ನಂತರದ ಅವಸ್ಥೆಯೇ ರಿಯಾಸ್. ನನ್ನ ಗುರುಗಳು ಎಲ್ಲೂ ಹೋಗಿಲ್ಲ. ನಾನು ಸರೋದ್ ನುಡಿಸುವಾಗ ಅಲ್ಲೆ ಇರ್ತಾರೆ’ ಎಂದು ರಾಜೀವ ಅವರು, ತಮ್ಮ ಗುರುಗಳನ್ನು ನೆನೆದು ಭಾವಪರವಶರಾದರು.

‘ಸಂಗೀತ ನೀಡುವ ಸಂತೋಷಕ್ಕೆ ಹೋಲಿಕೆ ಇಲ್ಲ. ಅದರ ಮುಂದೆ ಈ ಪದ್ಮಶ್ರೀ ಮುಂತಾದವೆಲ್ಲ ಏನೂ ಅಲ್ಲ’ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಪಂಡಿತ್ ಪರಮೇಶ್ವರ ಹೆಗಡೆ, ಐ.ಎಂ.ವಿಠ್ಠಲಮೂರ್ತಿ, ಉಸ್ತಾದ್ ಫಯಾಜ್ ಖಾನ್, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಚಂದ್ರಶೇಖರ್, ವನಮಾಲಾ ವಿಶ್ವನಾಥ್, ಶ್ರೀನಿವಾಸ ಕಪ್ಪಣ್ಣ ಮತ್ತು ರಮಾ ಪುಸ್ತಕಂ ಇದ್ದರು.

ಅಭಿನಂದನಾ ಕಾರ್ಯಕ್ರಮದ ಬಳಿಕ ರಾಜೀವ ತಾರಾನಾಥ ಅವರುಸರೋದ್ ವಾದನ ಕಛೇರಿ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.