ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲ್ಲೂಕು ದೊಡ್ಡಕನ್ನೆಲ್ಲಿ ಗ್ರಾಮದ ಸರ್ವೆ 10ರಲ್ಲಿ ರಾಜೀವ್ ಗಾಂಧಿ ಆಶ್ರಯ ಯೋಜನೆಯಲ್ಲಿ ನಿರ್ಮಿಸಲಾಗಿದ್ದ ಮನೆಗಳ ಫಲನುಭವಿಗಳಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ವಸಂತ್ ಕುಮಾರ್ ಅವರು ಹಕ್ಕುಪತ್ರ ವಿತರಿಸಿದರು.
ನಂತರ ಮಾತನಾಡಿದ ಅವರು, ‘2004ರಲ್ಲಿ ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿಯಲ್ಲಿ ಮಂಜೂರಾಗಿದ್ದ ಮನೆಗಳಿಗೆ 2012ರಲ್ಲಿ ಹಕ್ಕುಪತ್ರ ವಿತರಣೆಯಾಗಿತ್ತು. ಕೆಲವರು ಮಾಹಿತಿ ಕೊರತೆಯಿಂದ ಹಕ್ಕುಪತ್ರ ತೆಗೆದುಕೊಂಡಿರಲಿಲ್ಲ. ಅಂಥ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ನೀಡಲಾಗಿದೆ’ ಎಂದು ಹೇಳಿದರು.
ದೊಡ್ಡಕನ್ನೆಲ್ಲಿ ಗ್ರಾಮದಲ್ಲಿ ರಾಜೀವ್ ಗಾಂಧಿ ಆಶ್ರಯ ಮನೆ ಯೋಜನೆಯಡಿ 482 ಫಲಾನುಭವಿಗಳಿಗೆ ಮನೆ ಮಂಜೂರಾಗಿತ್ತು. ಈ ಪೈಕಿ 39 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗಿರಲಿಲ್ಲ. ಈ ಬಗ್ಗೆ ಭೀಮ ಸಂಘಟನೆಗಳ ಮಹಾ ಒಕ್ಕೂಟದಿಂದ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಹೋರಾಟಕ್ಕೆ ಮಣಿದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಇದರಿಂದ ಹಕ್ಕುಪತ್ರ ವಿತರಿಸಲಾಗಿದೆ ಎಂದು ಭೀಮ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಮರಿಯಪ್ಪ ಹೇಳಿದರು.
ಕರ್ನಾಟಕ ಸಾಮರಸ್ಯ ಸಮಿತಿ ಅಧ್ಯಕ್ಷ ದೊಡ್ಡಕನ್ನೆಲ್ಲಿ ಕೃಷ್ಣಪ್ಪ, ರಾಜೀವ್ ಗಾಂಧಿ ನಿಗಮದ ಅಧಿಕಾರಿ ಬಸ್ಸಪ್ಪ, ಹೆಬ್ಬಾಳ್, ವೆಂಕಟೇಶ್, ಸಾದರಮಂಗಲ ವೆಂಕಟೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.