ADVERTISEMENT

ವರನಟನ ಜನ್ಮದಿನ: ಅಭಿಮಾನಿಗಳ ಸಂಭ್ರಮ

ವಿವಿಧೆಡೆ ರಕ್ತದಾನ, ನೇತ್ರದಾನ ಜಾಗೃತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 19:01 IST
Last Updated 24 ಏಪ್ರಿಲ್ 2022, 19:01 IST
ಕಮಲಾನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್‌.ನಾರಾಯಣ್‌ ಮಾತನಾಡಿದರು. ಎಂ.ಶಿವರಾಜು ಇದ್ದಾರೆ
ಕಮಲಾನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್‌.ನಾರಾಯಣ್‌ ಮಾತನಾಡಿದರು. ಎಂ.ಶಿವರಾಜು ಇದ್ದಾರೆ   

ಬೆಂಗಳೂರು: ವರನಟ ದಿವಂಗತ ಡಾ.ರಾಜ್ ಕುಮಾರ್‌ ಅವರ 94ನೇ ಜನ್ಮದಿನವನ್ನು ಅಭಿಮಾನಿಗಳು ಭಾನುವಾರ ಸಡಗರದಿಂದ ಆಚರಿಸಿದರು. ಅವರ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಜನ್ಮದಿನದ ಅಂಗವಾಗಿ ನಗರದ ವಿವಿಧೆಡೆ ರಕ್ತದಾನ ಮತ್ತು ನೇತ್ರದಾನ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಯಿತು.

ಕಮಲನಗರ ಇಂದಿರಾ ಹೆಲ್ತ್ ಕೇರ್‌ನಲ್ಲಿ ಮಹದೇವಪ್ಪ ಪ್ರತಿಷ್ಠಾನ ಮತ್ತು ಅಕ್ಷಯ ಟ್ರಸ್ಟ್, ವಿಜಯ ನೇತ್ರಾಲಯ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್, ‘ರಾಜ್ ಕುಮಾರ್ ನಟಿಸಿದ ಪ್ರಥಮ ಚಲನಚಿತ್ರ ಬೇಡರ ಕಣಪ್ಪ. ಚಿತ್ರದ ಸಾರದಂತೆ ಸಾವಿನ ನಂತರವೂ ನೇತ್ರದಾನ ಮಾಡುವ ಮೂಲಕ ಅವರು ಅಂಧರ ಬಾಳಿಗೆ ಬೆಳಕಾದರು. ನೇತ್ರದಾನದ ಮಹತ್ವ ಬಗ್ಗೆ ಅರಿವು ಮೂಡಿಸಿದರು’ ಎಂದು ಸ್ಮರಿಸಿದರು. ಸ್ಥಳೀಯ ಮುಖಂಡ ಎಂ.ಶಿವರಾಜು, ಮೋಹನ್ ಕುಮಾರ್ ಮತ್ತು ವೈದ್ಯರಾದ ರಾಘವೇಂದ್ರ, ರಾಮಕೃಷ್ಣ ಭಾಗವಹಿಸಿದರು.

ADVERTISEMENT

ಮಲ್ಲೇಶ್ವರದ18ನೇ ಅಡ್ಡರಸ್ತೆ ಬಳಿಯ ಗೋಕಾಕ್ ಚಳವಳಿ ವೃತ್ತ ಮತ್ತು ಸುಬ್ರಹ್ಮಣ್ಯ ನಗರದ ಸಂಗೊಳ್ಳಿ ರಾಯಣ್ಣ ಉದ್ಯಾನದಲ್ಲಿ ರಾಜಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸಲಾಯಿತು. ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭಾಗವಹಿಸಿದರು.

ರಥೋತ್ಸವ: ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ಡಾ.ರಾಜ್ ಕುಮಾರ್ ರಥೋತ್ಸವ ಏರ್ಪಡಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್. ರಮೇಶ್ ಭಾಗವಹಿಸಿದ್ದರು.

ಕಂಠೀರವ ಸ್ಟುಡಿಯೋದ ಡಾ.ರಾಜ್‍ಕುಮಾರ್ ಸ್ಮಾರಕಕ್ಕೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಸಚಿವರಾದ ಮುನಿರತ್ನ, ಗೋಪಾಲಯ್ಯ ಸಂಸದರಾದ ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ಧರಾಜು, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್, ಒಬಿಸಿ ಮೋರ್ಚಾ ಅಧ್ಯಕ್ಷರಾದ ನೆ.ಲ.ನರೇಂದ್ರಬಾಬು ಭೇಟಿ ನೀಡಿ ಗೌರವ ಸಮರ್ಪಿಸಿದರು.

ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.