ADVERTISEMENT

‘ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಸಮಿತಿ ರಚಿಸಲಿ’

ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:05 IST
Last Updated 26 ಸೆಪ್ಟೆಂಬರ್ 2019, 20:05 IST
   

ಬೆಂಗಳೂರು: ‘ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಮಂದಿರ, ಮಸೀದಿ ಹಾಗೂ ಚರ್ಚ್ ನಿರ್ಮಾಣ ಮಾಡುವ ಅಧಿಕಾರ ಇಲ್ಲ. ಹೀಗಾಗಿ, ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಆಧ್ಯಾತ್ಮಿಕ ಗುರುಗಳನ್ನೊಳಗೊಂಡ ಒಂದು ಸಮಿತಿಯನ್ನು ಸರ್ಕಾರ ರಚನೆ ಮಾಡಬೇಕು’ ಎಂದು ಅಖಿಲ ಭಾರತ ರಾಮಜನ್ಮ ಭೂಮಿ ಪುನರುತ್ಥಾನ ಸಮಿತಿಯ ವಕ್ತಾರ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,`ಅಯೋಧ್ಯೆಯಲ್ಲಿ ಹಿಂದೂ ದೇವಾಲಯವಿರುವ ಬಗ್ಗೆ ಅನೇಕ ಕುರುಹುಗಳು ದೊರೆತಿವೆ. ಅದೇ ರೀತಿ, ಭಾರತೀಯ ಪುರಾತತ್ವ ಇಲಾಖೆಯಲ್ಲೂ ದಾಖಲೆಗಳಿವೆ. ಅಯೋಧ್ಯೆ ಹಾಗೂ ಅಲ್ಲಿನ ಸುತ್ತಮುತ್ತಲಿನ ಸ್ಥಳೀಯರನ್ನು ಈ ಬಗ್ಗೆ ವಿಚಾರಿಸಿದರೂ ನೈಜ ವಿಷಯಗಳು ಹೊರಬರುತ್ತವೆ. ಆದರೆ, ಕೆಲವು ಬುದ್ಧಿಜೀವಿಗಳು ಇತಿಹಾಸ ತಿರುಚಿ, ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಈ ದಾಖಲೆಗಳನ್ನೇ ನಿಜವೆಂದು ಮುಸ್ಲಿಂ ಸಮುದಾಯದ ಕೆಲವು ನಾಯಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ’ ಎಂದರು.

‘ಅಯೋಧ್ಯೆಗೆ ಬಾಬರ್ ಎಂಬ ವ್ಯಕ್ತಿಯೇ ಬಂದಿರಲಿಲ್ಲ. ಈ ಬಗ್ಗೆ ಬಾಬರ್ ನಾಮ ಪುಸ್ತಕದಲ್ಲೂ ಉಲ್ಲೇಖವಿದೆ. ಆ ಸ್ಥಳದಲ್ಲಿ ಬಾಬರಿ ಮಸೀದಿ ನಿರ್ಮಾಣವಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

‘1992ರಲ್ಲಿ ಲಕ್ಷಾಂತರ ಜನರು ಕರಸೇವೆಗೆಂದು ಅಯೋಧ್ಯೆಗೆ ತೆರಳಿದ್ದರು. ಈ ವೇಳೆ ಅವರು ಹಿಂದೂ ದೇವಾಲಯವನ್ನು ಬಾಬ್ರಿ ಮಸೀದಿ ಎಂದು ತಪ್ಪಾಗಿ ತಿಳಿದು, ಆಕ್ರೋಶಭರಿತರಾಗಿ ಅದನ್ನು ಧ್ವಂಸ ಮಾಡಿದ್ದರು. ದೇವಾಲಯ ಧ್ವಂಸಗೊಳ್ಳದಿದ್ದರೆ ದೇವಾಲಯವಿದ್ದ ಬಗ್ಗೆ ಇನ್ನೂ ಅನೇಕ ದಾಖಲೆಗಳು ದೊರೆಯುತ್ತಿದ್ದವು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.