ADVERTISEMENT

ವಿಶ್ವವಿದ್ಯಾಲಯಕ್ಕೆ ರಾಮಕೃಷ್ಣ ಹೆಗಡೆ ಹೆಸರಿಡಿ: ಪಿ.ಜಿ.ಆರ್‌. ಸಿಂಧ್ಯ ಆಗ್ರಹ

ರಾಮಕೃಷ್ಣ ಹೆಗಡೆಯವರ 99ನೇ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 14:38 IST
Last Updated 29 ಆಗಸ್ಟ್ 2025, 14:38 IST
ಜನತಾ ಪಕ್ಷ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ, ಚಿಂತನ ಮಂಥನ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆಯವರ ಭಾವಚಿತ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್, ಜೈ ಪ್ರಕಾಶ್ ಬಂಧು, ಪ್ರತಿಭಾ ಪ್ರಹ್ಲಾದ್, ಎಂ.ಪಿ. ನಾಡಗೌಡ, ಪಿ.ಜಿ.ಆರ್.ಸಿಂಧ್ಯ, ರವಿ ಹೆಗಡೆ ಪುಷ್ಪನಮನ ಸಲ್ಲಿಸಿದರು
ಪ್ರಜಾವಾಣಿ ಚಿತ್ರ
ಜನತಾ ಪಕ್ಷ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಜನ್ಮದಿನಾಚರಣೆ, ಚಿಂತನ ಮಂಥನ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆಯವರ ಭಾವಚಿತ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್, ಜೈ ಪ್ರಕಾಶ್ ಬಂಧು, ಪ್ರತಿಭಾ ಪ್ರಹ್ಲಾದ್, ಎಂ.ಪಿ. ನಾಡಗೌಡ, ಪಿ.ಜಿ.ಆರ್.ಸಿಂಧ್ಯ, ರವಿ ಹೆಗಡೆ ಪುಷ್ಪನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಇಡಬೇಕು. ಅವರ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್‌. ಸಿಂಧ್ಯ ತಿಳಿಸಿದರು.

ರಾಮಕೃಷ್ಣ ಅವರ 99ನೇ ಜನ್ಮದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಚಿಂತನ–ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

‘ಮನಮೋಹನ ಸಿಂಗ್‌, ಅಕ್ಕಮಹಾದೇವಿ, ರಾಣಿ ಚೆನ್ನಮ್ಮ ಸಹಿತ ಅನೇಕರ ಹೆಸರುಗಳನ್ನು ವಿಶ್ವವಿದ್ಯಾಲಯಗಳಿಗೆ ಇಡಲಾಗಿದೆ. ಅದಕ್ಕೆ ನನ್ನ ವಿರೋಧವಿಲ್ಲ. ಹಲವು ಪ್ರಥಮಗಳಿಗೆ ಕಾರಣರಾದ ಹೆಗಡೆಯವರ ಹೆಸರಲ್ಲಿಯೂ ವಿಶ್ವವಿದ್ಯಾಲಯ ಇರಬೇಕು’ ಎಂದು ಆಶಿಸಿದರು.

ADVERTISEMENT

ದೇಶದಲ್ಲಿಯೇ ಮೊದಲ ಬಾರಿಗೆ ವಿಧವಾ ವೇತನ, ರೈತರ ಸಾಲ ಮನ್ನಾ ಯೋಜನೆ ಜಾರಿಯಾಗಿದ್ದು ಕರ್ನಾಟಕದಲ್ಲಿ. ಅದನ್ನು ಜಾರಿಗೆ ತಂದವರು ಹೆಗಡೆ ಅವರು ಎಂದು ನೆನಪು ಮಾಡಿಕೊಂಡರು.

ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರು ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲರನ್ನು ಲವ–ಕುಶ ಎಂದು ಕರೆಯುತ್ತಿದ್ದರು. ಇಬ್ಬರನ್ನೂ ಬೆಳೆಸಿದರು. ಆ ನಂತರ ನಿಜಲಿಂಗಪ್ಪ ಅವರನ್ನು ಬಿಟ್ಟು ಬಂದರೆ ಮುಖ್ಯಮಂತ್ರಿ ಮಾಡುವುದಾಗಿ ಇಂದಿರಾಗಾಂಧಿ ಅವರು ಹೆಗಡೆಯವರನ್ನು ಆಹ್ವಾನಿಸಿದ್ದರು. ಆದರೆ, ಹೆಗಡೆ ಹೋಗಲಿಲ್ಲ. ನಿಜಲಿಂಗಪ್ಪ ಅವರ ಜೊತೆಗೆ ಕೊನೆಯವರೆಗೂ ಉಳಿದವರು ಹೆಗಡೆ ಒಬ್ಬರೇ. ಈಗ ಬೆಳೆಸುವವರೂ ಇಲ್ಲ. ಈ ರೀತಿ ನಿಷ್ಠೆ ತೋರುವವರೂ ಇಲ್ಲ ಎಂದು ಹೇಳಿದರು.

ಜನತಾ ‍ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೈಪ್ರಕಾಶ್‌ ಬಂಧು ಅಧ್ಯಕ್ಷತೆ ವಹಿಸಿದ್ದರು. ಭರತನಾಟ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್‌, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ.ಪಿ. ನಾಡಗೌಡ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಜನತಾಪಕ್ಷದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ವಾಣಿ ಎನ್‌.ಶೆಟ್ಟಿ, ಸ್ವಾಮಿ ವಿವೇಕಾನಂದ ಪೀಠಾಧ್ಯಕ್ಷ ಮಹಾಂತೇಶ ಸಿದ್ಧ ಗುರೂಜಿ, ಜನತಾ ಪಕ್ಷದ ರಾಜ್ಯ ನಾಯಕರಾದ ರಾಜ್‌ ಎ., ಮಾದೇಗೌಡ, ಸಂಘಟಕ ನಾಗೇಶ್‌ ಉಪಸ್ಥಿತರಿದ್ದರು. ವಿವಿಧ ರಂಗಗಳ ಸಾಧಕರಿಗೆ ಮೌಲ್ಯಾಧಾರಿತ ‘ಕಾಯಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.