ADVERTISEMENT

ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಮಸ್ಯೆಯಾಗಿದ್ದೇ BJPಕಾಲದಲ್ಲಿ: ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 18:04 IST
Last Updated 14 ಜನವರಿ 2026, 18:04 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ವೇತನ‌ ಪರಿಷ್ಕರಣೆ ಸಂಬಂಧ ಮೊದಲ‌ ಬಾರಿಗೆ ಮುಷ್ಕರ ಮಾಡಿದ್ದು ಬಿಜೆಪಿ‌ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

‘ಸಾರಿಗೆ ನೌಕರರಿಗೆ ಶೇ 15ರಷ್ಟು ಹೆಚ್ಚಳದ ಹಿಂಬಾಕಿಯನ್ನು ನೀಡಿಲ್ಲ. 38 ತಿಂಗಳ ಹಿಂಬಾಕಿಯನ್ನು ನೀಡುವಂತೆ ಒತ್ತಾಯಿಸಿ ನಿವೃತ್ತ ನೌಕರರು ಪ್ರತಿಭಟಿಸುವ ಸ್ಥಿತಿಯನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸೃಷ್ಟಿಸಿದೆ’ ಎಂದು ಬಿಜೆಪಿ ‘ಎಕ್ಸ್‌’ ಖಾತೆಯಲ್ಲಿ ಟೀಕಿಸಿತ್ತು. ಅದಕ್ಕೆ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಅವಧಿಯಲ್ಲಿ ವೇತನಕ್ಕಾಗಿ 15 ದಿವಸಗಳ ಸುದೀರ್ಘ ಮುಷ್ಕರ ನಡೆದಿತ್ತು. ಮುಷ್ಕರದಲ್ಲಿ ಪಾಲ್ಗೊಂಡ 3,000 ನೌಕರರನ್ನು ವಜಾ, ಅಮಾನತು, ವರ್ಗಾವಣೆ ಮಾಡಿ, ಹಲವು ಸಿಬ್ಬಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. ಇಂದಿಗೂ ಅವರು ಕೋರ್ಟ್‌ ಕಚೇರಿ ಅಲೆಯುತ್ತಿದ್ದಾರೆ. ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ 38 ತಿಂಗಳ ಬಾಕಿ ಹಣ ಪಾವತಿ ಮಾಡದೇ, ಅದಕ್ಕಾಗಿ ಯಾವುದೇ ಹಣ ಮೀಸಲಿರಿಸದೆ ಸಾರಿಗೆ ನೌಕರರನ್ನು ಬೀದಿಗೆ ತಂದು ಅವರು ಮುಷ್ಕರವನ್ನು ಮಾಡುವ ಹಂತಕ್ಕೆ ತಂದಿರುವುದನ್ನು ಮರೆತು ಬಿಟ್ಟಿರಾ ಎಂದು ಕೇಳಿದ್ದಾರೆ.

ADVERTISEMENT

‘2023ರಲ್ಲಿ ವೇತನ‌ ಹೆಚ್ಚಳ‌ ಮಾಡಿ ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ನೀಡದೆ ಹೋಗಿದ್ದೀರಿ. ನಾವು ₹224 ಕೋಟಿ ಪಾವತಿ ಮಾಡಿದ್ದೇವೆ. ನಿಮ್ಮ ಕಾಲದಲ್ಲಿ ಶೂನ್ಯ ನೇಮಕಾತಿ, ಹೊಸ ಬಸ್‌ ಸೇರ್ಪಡೆ ಇಲ್ಲ. ನೌಕರರಿಗೆ ಅರ್ಧ ವೇತನ. ಈ ರೀತಿ ದುರಾಡಳಿತ ನೀಡಿದವರು ಈಗ ‘ಎಕ್ಸ್‌’ ಖಾತೆಯಲ್ಲಿ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ನಮ್ಮ ಕಾಲದಲ್ಲಿ ಬರೋಬ್ಬರಿ 10,000 ಹುದ್ದೆಗಳಿಗೆ ನೇಮಕಾತಿ, 7,800 ಹೊಸ ಬಸ್ಸುಗಳು, ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿನಂದು ಪೂರ್ತಿ ಸಂಬಳ ಪಾವತಿ, ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ‌ ಪ್ರಯತ್ನ ಆಗಿದೆ. ನಿಮ್ಮ ಅಧಿಕಾರದ ಅವಧಿಯಲ್ಲಿ ಕಾಳಜಿ ವಹಿಸದೇ ಈಗ ಕಾಳಜಿಯ ನಾಟಕ ಮಾಡಲು ನಾಚಿಕೆಯಾಗುವುದಿಲ್ಲವೇ ಎಂದು ‘ಎಕ್ಸ್‌’ ನಲ್ಲಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.