ADVERTISEMENT

ರಾಮನವಮಿ: ಸಾಂಕೇತಿಕ ಪೂಜೆಗೆ ನಿರ್ಧಾರ

ಕೊರೊನಾದಿಂದ ಹಬ್ಬಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 19:24 IST
Last Updated 20 ಏಪ್ರಿಲ್ 2021, 19:24 IST

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿದ್ದು, ನಗರದಾದ್ಯಂತ ಅದ್ದೂರಿಯಾಗಿ ನಡೆಯುತ್ತಿದ್ದ ಶ್ರೀರಾಮ ನವಮಿ ಆಚರಣೆ ಈ ಬಾರಿ ಸರಳವಾಗಿ ನೆರವೇರಲಿದೆ. ದೇವಸ್ಥಾನಗಳಿಗೆ ಭಕ್ತರಿಗೆ ಈ ಬಾರಿ ಪ್ರವೇಶ ಇರುವುದಿಲ್ಲ.

ದೇವಸ್ಥಾನಗಳಲ್ಲೂ ರಾಮನವಮಿ ಅಂಗವಾಗಿ ಯಾವುದೇ ವಿಜೃಂಭಣೆಯ ಪೂಜಾ ಪುನಸ್ಕಾರಗಳು, ವಿಶೇಷ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಿರಲು ಆಡಳಿತ ಮಂಡಳಿಗಳು ನಿರ್ಧರಿಸಿದ್ದು, ಸಾಂಕೇತಿಕವಾಗಿ ಸರಳ ಪೂಜೆ ಸಲ್ಲಿಸಲು ಮುಂದಾಗಿವೆ.

ರಾಮನವಮಿ ದಿನದಂದು ರಾಮ, ಲಕ್ಷ್ಮಣ, ಸೀತೆ ಹಾಗೂಆಂಜನೇಯ ಮೂರ್ತಿಗಳಿಗೆ ತರಹೇವಾರಿ ಅಲಂಕಾರಗಳು, ಪಂಚಾಭಿಷೇಕ, ಹೋಮ, ಕಲ್ಯಾಣೋತ್ಸವ ಹಾಗೂ ಬೃಹತ್ ಮೆರವಣಿಗೆಗಳು ನಡೆಯುತ್ತಿದ್ದವು. ಶ್ರೀರಾಮ ಹಾಗೂ ಹನುಮಂತನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಸಲ್ಲುತ್ತಿದ್ದವು. ಪೂಜೆಯ ನಂತರ ಪಾನಕ, ಮಜ್ಜಿಗೆ, ಕೋಸಂಬರಿ ಹಾಗೂ ಪ್ರಸಾದ ವಿತರಣೆ ಹಬ್ಬದ ವಿಶೇಷ.

ADVERTISEMENT

ಆದರೆ, ಕೊರೊನಾ ನಿರ್ಬಂಧದಿಂದ ಯಾವುದೇ ಮೆರವಣಿಗೆಗಳು ಹಾಗೂ ಜನ ಗುಂಪು ಸೇರುವುದನ್ನು ನಿಷೇಧಿಸಿರುವುದರಿಂದ ಪ್ರಸಾದ ವಿತರಣೆಯೂ ಇರುವುದಿಲ್ಲ. ಭಕ್ತಾದಿಗಳು ಈ ರಾಮನವಮಿಯನ್ನು ಮನೆಗಳಲ್ಲೇ ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.

ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ವಿದ್ಯಾಪೀಠ ವೃತ್ತ, ಗಿರಿನಗರ, ರಾಗಿಗುಡ್ಡ ಆಂಜನೇಯ­ಸ್ವಾಮಿ ದೇವಸ್ಥಾನ, ಈಜಿಪುರ, ವೈಯಾಲಿಕಾವಲ್, ಹನುಮಂತನ­ಗರದ ರಾಮಾಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಅಲ್ಲಿನ ಅರ್ಚಕರು ದೇವಾಲಯದ ಮಟ್ಟಿಗೆ ಪೂಜೆ ಮಾಡಲು ನಿರ್ಧರಿಸಿದ್ದಾರೆ.

‘ಕೊರೊನಾ ನಿರ್ಬಂಧ ಹೇರಿರುವುದರಿಂದ ದೇವಸ್ಥಾನದಲ್ಲಿ ಭಕ್ತರಿಗೆ ಅವಕಾಶ ಇರುವುದಿಲ್ಲ. ದೇವರಿಗೆ ಸರಳವಾಗಿ ಪೂಜೆ ಮಾತ್ರ ನಡೆಯಲಿದೆ’ ಎಂದು ಈಜಿಪುರ ಶ್ರೀರಾಮ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರೊಬ್ಬರು ತಿಳಿಸಿದರು.

ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ:ಈ ಬಾರಿ ಮನೆಗಳಲ್ಲೇರಾಮನವಮಿ ಆಚರಿಸಲು ಮುಂದಾಗಿರುವ ಜನರು ಹಬ್ಬದ ಖರೀದಿಗೆ ಮಾರುಕಟ್ಟೆಗಳಲ್ಲಿ ಮಂಗಳವಾರ ಸೇರಿದ್ದರು. ಹಬ್ಬಕ್ಕಾಗಿ ಹೂವು, ಹಣ್ಣು, ತರಕಾರಿ, ನಿಂಬೆಹಣ್ಣು, ಸೌತೆಕಾಯಿ, ಕರಬೂಜ ಖರೀದಿಯಲ್ಲಿ ತೊಡಗಿದ್ದರು.

‘ರಾಮನವಮಿಗೆ ಹೂವಿನ ದರಗಳು ಅಷ್ಟೇನೂ ಏರಿಕೆಯಾಗಿಲ್ಲ.ಸೇವಂತಿಗೆ ಪ್ರತಿ ಕೆ.ಜಿ.ಗೆ ₹80ರಿಂದ 120ರಂತೆ ಮಾರಾಟ ಆಗುತ್ತಿದೆ. ಗುಲಾಬಿ ₹100, ಮಲ್ಲಿಗೆ ₹200 ಹಾಗೂ ಕನಕಾಂಬರ ₹300ರಂತೆ ಮಾರಾಟವಾಗುತ್ತಿದೆ. ಮೆರವಣಿಗೆ, ಅಲಂಕಾರಗಳು ಇಲ್ಲದಿರುವುದರಿಂದ ಹೂವಿಗೆ ಬೇಡಿಕೆ ಇಲ್ಲ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.