ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ: ಪ್ರಮುಖ ಸಂಚುಕೋರ ಬಂಧನ

ಪ್ರಕರಣ ಭೇದಿಸಿದ ಎನ್‌ಐಎ ಅಧಿಕಾರಿಗಳು- ಸ್ಫೋಟಕ ಇರಿಸಿದ್ದ ಶಂಕಿತನಿಗೆ ಸಹಕಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 20:54 IST
Last Updated 28 ಮಾರ್ಚ್ 2024, 20:54 IST
<div class="paragraphs"><p>ದಿ ರಾಮೇಶ್ವರಂ ಕೆಫೆ</p></div>

ದಿ ರಾಮೇಶ್ವರಂ ಕೆಫೆ

   

(ಪಿಟಿಐ ಚಿತ್ರ)

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಎನ್‌ಐಎ ಅಧಿಕಾರಿಗಳು, ಪ್ರಮುಖ ಸಂಚುಕೋರ ಎನ್ನಲಾದ ಮುಜಮೀಲ್ ಶರೀಫ್‌ನನ್ನು ಬಂಧಿಸಿದ್ದಾರೆ.

ADVERTISEMENT

‘ಚಿಕ್ಕಮಗಳೂರು ದುಬೈನಗರದ ಮುಜಮೀಲ್, ಕೆಫೆಯಲ್ಲಿ ಬಾಂಬ್‌ ಇರಿಸಿದ್ದ ಶಂಕಿತ ಹಾಗೂ ಇತರರ ಜೊತೆ ಸೇರಿ ಸಂಚು ರೂಪಿಸಿದ್ದ. ಕೆಲ ಪುರಾವೆಗಳನ್ನು ಆಧರಿಸಿ ಮುಜಮೀಲ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಈತನೇ ಪ್ರಮುಖ ಸಂಚುಕೋರ ಎಂಬುದು ಗೊತ್ತಾಗಿದೆ. ಈತನನ್ನು ಬುಧವಾರ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿಸಲಾಗಿದೆ’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

‘ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1ರಂದು ಬಾಂಬ್ ಸ್ಫೋಟವಾಗಿತ್ತು. ತೀರ್ಥಹಳ್ಳಿಯ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್ ಎಂಬಾತನೇ ಬಾಂಬ್ ಇರಿಸಿದ್ದನೆಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ. ಈತನ ಕೃತ್ಯಕ್ಕೆ ಇನ್ನೊಬ್ಬ ಶಂಕಿತ ತೀರ್ಥಹಳ್ಳಿಯ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಸಹಕಾರ ನೀಡಿದ್ದ ಎಂಬುದಕ್ಕೆ ಪುರಾವೆಗಳು ಲಭ್ಯವಾಗಿವೆ’ ಎಂದು ಮೂಲಗಳು ಹೇಳಿವೆ.

18 ಸ್ಥಳಗಳ ಮೇಲೆ ದಾಳಿ: ‘ಬಾಂಬ್ ಇರಿಸಲು ಸಜ್ಜಾಗಿದ್ದ ಮುಸಾವೀರ್, ತಾಹಾಗೆ ಅಗತ್ಯವಿದ್ದ ಕಚ್ಚಾ ಸಾಮಗ್ರಿ ಹಾಗೂ ಇತರೆ ವಸ್ತುಗಳನ್ನು ಮುಜಮೀಲ್ ಪೂರೈಸಿದ್ದ. ರಾಮೇಶ್ವರಂ ಕೆಫೆ ಸ್ಥಳಕ್ಕೆ ತಲುಪಲು ಹಾಗೂ ಅಲ್ಲಿಂದ ಪರಾರಿಯಾಗುವ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆಗೂ ಅನುಕೂಲ ಕಲ್ಪಿಸಿದ್ದ. ಮುಜಮೀಲ್ ಸಹಾಯದಿಂದಲೇ ಮುಸಾವೀರ್, ಕೆಫೆಯಲ್ಲಿ ಬಾಂಬ್ ಇರಿಸಿ ಪರಾರಿಯಾಗಿದ್ದಾನೆ’ ಎಂದು ಎನ್‌ಐಎ ಮೂಲಗಳು ಹೇಳಿವೆ.

‘ಸ್ಫೋಟದಲ್ಲಿ ಭಾಗಿಯಾಗಿದ್ದವರ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಮಾಡಲಾಯಿತು. ಮುಜಮೀಲ್, ಮುಸಾವೀರ್, ಅಬ್ದುಲ್ ಮಥೀನ್ ತಾಹಾ ಮನೆಗಳು ಹಾಗೂ ಅಂಗಡಿಗಳಲ್ಲಿ ಶೋಧ ನಡೆಸಲಾಯಿತು. ದಾಳಿ ಸಂದರ್ಭದಲ್ಲೇ ಮುಜಮೀಲ್ ಸಿಕ್ಕಿಬಿದ್ದ. ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ನಗದು ಜಪ್ತಿ ಮಾಡಲಾಯಿತು. ಮುಜಮೀಲ್, ಮೊಬೈಲ್ ಮಳಿಗೆ ಇಟ್ಟುಕೊಂಡಿದ್ದನೆಂಬ ಮಾಹಿತಿ ಇದೆ’ ಎಂದು ತಿಳಿಸಿವೆ.

‘ಪ್ರಮುಖ ಶಂಕಿತರಾದ ಮುಸಾವೀರ್ ಹಾಗೂ ಅಬ್ದುಲ್ ತಾಹಾ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ಇವರ ಚಲನವಲನಗಳಿವೆ. ಅವರಿಬ್ಬರ ಪತ್ತೆಗೆ ಶೋಧ ಮುಂದುವರಿಸಲಾಗಿದೆ’ ಎಂದು ಎನ್‌ಐಎ ಮೂಲಗಳು ಹೇಳಿವೆ.

ದೊಡ್ಡ ಸಂಚು: ‘ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯದಲ್ಲಿರುವ ಶಂಕಿತರು, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಇದೊಂದು ದೊಡ್ಡ ಸಂಚು. ಇದರ ಹಿಂದಿರುವ ಪ್ರತಿಯೊಬ್ಬರನ್ನು ಪತ್ತೆ ಮಾಡಲು ತನಿಖೆ ಮುಂದುವರಿದಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.