ADVERTISEMENT

ಮನೆಕೆಲಸದವರನ್ನು ಕಾರ್ಮಿಕರನ್ನಾಗಿ ಗುರುತಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 16:13 IST
Last Updated 6 ಜೂನ್ 2025, 16:13 IST
   

ಬೆಂಗಳೂರು: ‘ಮನೆ ಕೆಲಸದವರಿಗೆ ಜೀವನ ಭದ್ರತೆ ಇಲ್ಲ. ಅವರನ್ನು ಮೊದಲು ಕಾರ್ಮಿಕರು ಎಂದು ಗುರುತಿಸಬೇಕು. ಸುಪ್ರೀಂ ಕೋರ್ಟ್‌ ಆದೇಶದಂತೆ ಗೃಹ ಕಾರ್ಮಿಕರಿಗಾಗಿ ರಾಷ್ಟ್ರೀಯ ಕಾನೂನು ರೂಪಿಸಬೇಕು’ ಎಂದು ಕರ್ನಾಟಕ ರಾಜ್ಯ ಮನೆಕೆಲಸ ಕಾರ್ಮಿಕರ ಯೂನಿಯನ್‌ಗಳ ಒಕ್ಕೂಟ ಆಗ್ರಹಿಸಿದೆ.

ಕಾನೂನು ರೂಪಿಸುವಾಗ ಪ್ರಮುಖ ಅಂಶಗಳನ್ನು ಗಮನಿಸಬೇಕು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗೆ ನಿಯಮ ರೂಪಿಸಬೇಕು. ಗೃಹ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ತರಬೇಕು. ಭವಿಷ್ಯನಿಧಿ ಮತ್ತು ಪಿಂಚಣಿ ನೀಡಲು ಕ್ರಮವಹಿಸಬೇಕು ಎಂದು ಒಕ್ಕೂಟದ ಸದಸ್ಯರಾದ ಕರಿಬಸಪ್ಪ ಮತ್ತು ಸಿಸ್ಟರ್‌ ಸಹಾಯ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕನಿಷ್ಠ ಕೂಲಿ ಜಾರಿ ಮಾಡಬೇಕು. ಮಾಲೀಕರು ಜಾತಿ ತಾರತಮ್ಯ ಮಾಡುವುದನ್ನು ತಡೆಗಟ್ಟಬೇಕು. ಕಾರ್ಮಿಕರು ಎಂದು ನೋಂದಣಿ ಮಾಡಿಕೊಳ್ಳಬೇಕು ಮತ್ತು ಅವರಿಗೆ ಗುರುತಿನ ಚೀಟಿ ನೀಡಬೇಕು. ವಾರ್ಷಿಕವಾಗಿ ಬೋನಸ್‌ ನೀಡಬೇಕು. ವಾರದ ರಜೆ ನೀಡಬೇಕು. ವಲಸೆ ಕಾರ್ಮಿಕರನ್ನು ಗುರುತಿಸಬೇಕು. ಅನಾರೋಗ್ಯ ಅಥವಾ ಸಾಂದರ್ಭಿಕ ರಜೆ ಬೇಕಾದ ಸಂದರ್ಭದಲ್ಲಿ ವೇತನ ಸಹಿತ ರಜೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಗೃಹ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಬೇಕು. ದೂರು ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನ ಅಳವಡಿಸಿಕೊಳ್ಳಬೇಕು. ಕಳ್ಳಸಾಗಣೆ ತಡೆಗಟ್ಟಬೇಕು. ನೋಟಿಸ್‌ ನೀಡದೇ ಕೆಲಸದಿಂದ ತೆಗೆಯಬಾರದು. ಕೆಲಸದಿಂದ ತೆಗೆದರೆ ಪರಿಹಾರ ನೀಡಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು. ಕನಿಷ್ಠ ವಯಸ್ಸು ನಿಗದಿಪಡಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ಎಲ್ಲ ಮನೆಕೆಲಸದವರ ಮಾಹಿತಿ ಇರಬೇಕು ಎಂದು ಒತ್ತಾಯಿಸಿದರು.

ಮನೆಕೆಲಸದವರಲ್ಲಿ ಶೇ 90ಕ್ಕೂ ಅಧಿಕ ಮಂದಿ ಮಹಿಳೆಯರೇ ಇದ್ದು, ಅವರಿಗೆ ಜೀವನ ಭದ್ರತೆ ನೀಡಲು ಕಾನೂನು ರೂಪಿಸಲು ಸುಪ್ರೀಂಕೋರ್ಟ್‌ ಇತ್ತೀಚೆಗೆ ಆದೇಶ ನೀಡಿದ್ದು, ಸರ್ಕಾರ ಅದನ್ನು ಪಾಲನೆ ಮಾಡಬೇಕು ಎಂದರು.

ಒಕ್ಕೂಟದ ಸದಸ್ಯರಾದ ಶಶಿಕಲಾ, ಪ್ರೀಯಾ, ಪ್ರೇಮಾ, ರೋಸ್‌ ಮೇರಿ, ಮಹೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.