ADVERTISEMENT

ತಾರತಮ್ಯ ಆಗದಂತೆ ಎಚ್ಚರವಹಿಸಿ: ಬಿಬಿಎಂಪಿಗೆ ಸೂಚನೆ

ನವನಗರೋತ್ಥಾನ ಕಾಮಗಾರಿ ಬಿಲ್‌ ಪಾವತಿಯಲ್ಲಿ ತಾರತಮ್ಯ: ಮುಖ್ಯಮಂತ್ರಿಗೆ ದೂರು ನೀಡಿದ ಶಾಸಕ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 18:24 IST
Last Updated 8 ಜೂನ್ 2021, 18:24 IST
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ   

ಬೆಂಗಳೂರು: ಸರ್ಕಾರವು 2018–19ನೇ ಸಾಲಿನ ಬಜೆಟ್‌ನಲ್ಲಿ ನವನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ಮಂಜೂರು ಮಾಡಿರುವ ಅನುದಾನದಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಬಿಲ್‌ ಪಾವತಿಯಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇತ್ತೀಚೆಗೆ ದೂರು ನೀಡಿದ್ದಾರೆ.

ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ತಾರತಮ್ಯ ಆಗದಂತೆ ಬಿಲ್‌ ಪಾವತಿಗೆ ಕ್ರಮಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಗೆ ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ. ಬಿಲ್‌ ಪಾವತಿಯಲ್ಲಿ ತಾರತಮ್ಯ ಸರಿಪಡಿಸುವಂತೆ ಸೂಚಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಪತ್ರ ಬರೆದಿದ್ದಾರೆ.

ಮುನಿರತ್ನ ಪತ್ರದಲ್ಲೇನಿದೆ: ‘2018–19ನೇ ಸಾಲಿನಲ್ಲಿ ಮುಖ್ಯಮಂತ್ರಿ ನವನಗರೋತ್ಥಾನ ಯೋಜನೆಯಡಿ ₹ 8,015.37 ಕೋಟಿ ಕ್ರಿಯಾಯೋಜನೆಗೆ ಬಿಬಿಎಂಪಿ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ. ಇದರಡಿ ಪ್ರಮುಖ ರಸ್ತೆಗಳು, ಉಪಪ್ರಮುಖ ರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳ ಅಭಿವೃದ್ಧಿಗೆ ₹ 4,107.34 ಕೋಟಿ ಮೀಸಲಿಡಲಾಗಿದೆ. ಹಲವಾರು ಕಾಮಗಾರಿಗಳು ಪೂರ್ಣಗೊಂಡಿದ್ದು, ಬಿಲ್‌ ಪಾವತಿಗಾಗಿ ಕೋರಿಕೆಗಳು ಸಲ್ಲಿಕೆಯಾಗಿವೆ. ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ನಿರ್ವಹಿಸಿರುವ ಪ್ರಮುಖ ರಸ್ತೆಗಳಿಗೆ ಮತ್ತು ಉಪ ಪ್ರಮುಖ ರಸ್ತೆಗಳಿಗೆ ಬಿಲ್‌ ಸಲ್ಲಿಕೆ ಆದ ತಕ್ಷಣವೇ ಆದ್ಯತೆ ಮೇರೆಗೆ ಹಣ ಬಿಡುಗಡೆ ಮಾಡಲಾಗುತ್ತಿದೆ.’

ADVERTISEMENT

‘ಈ ಯೋಜನೆಯಡಿ ನಗರದ ವಿವಿಧ ಕ್ಷೇತ್ರಗಳಿಗೆ ಹಣ ಬಿಡುಗಡೆಯಾಗಿದೆ. ಆದರೆ, ಆರ್‌.ಆರ್‌.ನಗರ ಕ್ಷೇತ್ರದ ಕಾಮಗಾರಿಗಳಿಗೆ ಬಿಲ್‌ ಪಾವತಿಸುವಾಗ ವಿಳಂಬ ಮಾಡಲಾಗುತ್ತಿದ್ದು, ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಹಲವರು ನನ್ನಲ್ಲಿ ಅಲವತ್ತುಕೊಂಡಿದ್ದಾರೆ. ಆರ್‌.ಆರ್‌.ನಗರ ಕ್ಷೇತ್ರದ ಕಾಮಗಾರಿಗಳ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಮುಖ್ಯಮಂತ್ರಿಗೆ ಮೇ 24ರಂದು ಬರೆದ ಪತ್ರದಲ್ಲಿ ಮುನಿರತ್ನ ಒತ್ತಾಯಿಸಿದ್ದಾರೆ.

ರಾಕೇಶ್‌ ಸಿಂಗ್‌ ಅವರು ಬಿಬಿಎಂಪಿಗೆ ಬರೆದ ಪತ್ರದಲ್ಲಿ, ‘ನವನಗರೋತ್ಥಾನ ಯೋಜನೆಯಡಿ ಕೈಗೊಳ್ಳುವ ಭಾರಿ ಕಾಮಗಾರಿಗಳ ಬಿಲ್‌ ದೊಡ್ಡ ಮೊತ್ತದ್ದಾಗಿರುತ್ತವೆ. ಇವುಗಳ ಅನುಷ್ಠಾನಕ್ಕೆ ದೀರ್ಘಾವಧಿ ಬೇಕಾಗುತ್ತದೆ. ವಾರ್ಡ್‌ ಕಾಮಗಾರಿಗಳು ಅಲ್ಪಾವಧಿಯಲ್ಲಿ ಅನುಷ್ಠಾನಗೊಂಡು ಬಿಲ್‌ ಕಡಿಮೆ ಅವಧಿಯಲ್ಲಿ ಸಲ್ಲಿಕೆಯಾಗುತ್ತಿದೆ. ಸರ್ಕಾರದಿಂದ ಬಿಬಿಎಂಪಿಗೆ ಮೂರು ತಿಂಗಳಿಗೊಮ್ಮೆ ಈ ಯೋಜನೆಯ ಅನುದಾನ ನಿಯಮಿತವಾಗಿ ಬಿಡುಗಡೆಯಾಗುತ್ತಿದೆ. ಕಾಮಗಾರಿಗೆ ಅಡ್ಡಿ ಆಗದಂತೆ ಬಿಲ್‌ ಪಾವತಿಗೆ ಅದನ್ನು ವಿನಿಯೋಗಿಸುವ ಹೊಣೆ ಬಿಬಿಎಂಪಿಯದು’ ಎಂದು ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.