ADVERTISEMENT

ಕೋವಿಡ್ ಆರೈಕೆಯಲ್ಲಿರುವವರ ಮನೆಗೆ ಕೆಂಪು ಪಟ್ಟಿ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:31 IST
Last Updated 22 ಮೇ 2021, 19:31 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ಬೆಂಗಳೂರು: ಕೋವಿಡ್ ಪೀಡಿತರಾಗಿದ್ದು ಮನೆಯಲ್ಲಿಯೇ ಆರೈಕೆ (ಹೋಂ ಐಸೊಲೇಷನ್) ಪಡೆಯುತ್ತಿರುವವರ ನಿವಾಸದ ಮುಂದೆ ಕೆಂಪು ಪಟ್ಟಿ ಅಂಟಿಸಲು ಸರ್ಕಾರ ನಿರ್ಧರಿಸಿದೆ.

'ಮನೆ ಆರೈಕೆಯಲ್ಲಿರುವ ಸೋಂಕಿತರು ಹೊರಗಡೆ ತಿರುಗಾಡುತ್ತಿರುವುದೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಇದನ್ನು ತಡೆಯಲು ಈ‌ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಅರಣ್ಯ ಸಚಿವ ಮತ್ತು ಕೋವಿಡ್ ಸಹಾಯವಾಣಿಗಳು ಹಾಗೂ ಕೋವಿಡ್ ವಾರ್ ರೂಮ್ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸೋಂಕಿತರ ಮನೆಯ ಅಕ್ಕ-ಪಕ್ಕದಲ್ಲಿರುವವರಿಗೂ ಇದರಿಂದ ಮಾಹಿತಿ ತಿಳಿಯಲಿದೆ. ಅವರು‌ ಎಚ್ಚರಿಕೆಯಿಂದಿರಲು ಸಾಧ್ಯವಾಗುತ್ತದೆ' ಎಂದು ಅವರು ಹೇಳಿದರು.

ADVERTISEMENT

'ಇಂತಹ‌ ಕ್ರಮಗಳಿಂದ ಸೋಂಕಿತರಿಗೆ ಅವಮಾನ ಅಥವಾ ಮುಜುಗರ ಉಂಟಾಗಬಾರದು ಎಂದು ಹೈಕೋರ್ಟ್ ಹೇಳಿರುವುದೂ ಸರ್ಕಾರದ ಗಮನದಲ್ಲಿದೆ. ಸ್ವಯಂ ಸೇವಕರು ಈ ಬಗ್ಗೆ ನೆರೆ ಹೊರೆಯವರಿಗೆ ಮಾಹಿತಿ ನೀಡುವುದಲ್ಲದೆ ಹೇಗಿರಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಮುಜುಗರ, ಅವಮಾನಕ್ಕೆ ಆಸ್ಪದವಾಗದಂತೆ ತಿಳಿವಳಿಕೆ ಮೂಡಿಸುತ್ತಾರೆ' ಎಂದರು.

ನಗರದಲ್ಲಿ ಸಕ್ರಿಯ ಪ್ರಕರಣಗಳ ಪೈಕಿ 1.58 ಲಕ್ಷ ಜನ ಮನೆ‌ ಆರೈಕೆಯಲ್ಲಿದ್ದಾರೆ ಎಂದು ಕೋವಿಡ್ ವಾರ್ ರೂಮ್ ಅಂಕಿ ಅಂಶಗಳು ಹೇಳುತ್ತವೆ.‌

'ಮನೆ‌ ಆರೈಕೆಯಲ್ಲಿರುವವರ ಮೇಲೆ‌ ನಿಗಾ ಇಡಲು ನಗರದಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ತಂಡಗಳನ್ನು ರಚಿಸಲಾಗುವುದು.‌ ನಗರಗಳು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ಕಾಗಿ ಸ್ವಯಂ ಸೇವಕರನ್ನು ಆರೋಗ್ಯ ಕಾರ್ಯಕರ್ತರೊಂದಿಗೆ ಕಳುಹಿಸಲಾಗುವುದು' ಎಂದು ಸಚಿವರು ತಿಳಿಸಿದರು.‌

'ಮನೆ ಆರೈಕೆಯಲ್ಲಿರುವವರ ಪೈಕಿ ಶೇ 25ರಷ್ಟು ಮಂದಿ ತಪ್ಪು ವಿಳಾಸ ಮತ್ತು ತಪ್ಪು ದೂರವಾಣಿ ಸಂಖ್ಯೆ ನೀಡಿರುವುದು ಗಮನಕ್ಕೆ ಬಂದಿದೆ. ಕೆಲವರ ದೂರವಾಣಿ ಸ್ಥಗಿತಗೊಂಡಿದೆ. ತಂಡವು ಇಂಥವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಿದೆ' ಎಂದು ಅವರು ತಿಳಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.