ADVERTISEMENT

ಅಪ್ಪಾಜಿ ಗೌಡ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:17 IST
Last Updated 27 ಮಾರ್ಚ್ 2024, 16:17 IST
   

ಬೆಂಗಳೂರು: ವಿದ್ಯಾರ್ಥಿನಿಯೊಬ್ಬರಿಂದ ಕಾಲೇಜು ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ಅದನ್ನು ದುರುಪಯೋಗ ಪಡಿಸಿಕೊಂಡ ಆರೋಪದಡಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅಪ್ಪಾಜಿ ಗೌಡ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರ ಮೇಲಿನ ಆರೋಪಗಳಲ್ಲಿ ಹುರುಳಿಲ್ಲ ಎಂಬ ಅಭಿಪ್ರಾಯಕ್ಕೆ ಬರಲು ಮೇಲ್ನೋಟಕ್ಕೆ ಸಾಧ್ಯವಿಲ್ಲ. ಪೊಲೀಸರು ಈಗಾಗಲೇ ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ, ದೂರು ರದ್ದುಪಡಿಸಲು ಈ ಅರ್ಜಿ ಅರ್ಹವಾಗಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ಪ್ರಕರಣವೇನು?: ‘ಒಕ್ಕಲಿಗರ ಸಂಘದ ಒಡೆತನದಲ್ಲಿರುವ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಾಕ್ಷಿ ಎಂಬ ವಿದ್ಯಾರ್ಥಿನಿ ಎಂಬಿಬಿಎಸ್‌ ಕೋರ್ಸ್‌ಗೆ ದಾಖಲಾಗಿದ್ದರು. ಆರೋಪಿಗಳು ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿನಿಯಿಂದ ₹ 50 ಲಕ್ಷ ಪಡೆದು ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂಬುದು ಆರೋಪ. ಡಾ.ಅಪ್ಪಾಜಿ ಗೌಡ ಪ್ರಕರಣದ ಮೊದಲ ಆರೋಪಿ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಮುಖ್ಯಸ್ಥರು ಮತ್ತು ಅಧ್ಯಕ್ಷರ ವಿರುದ್ಧ ಸಂಘದ ಮುಖ್ಯ ಅಧಿಕಾರಿ ಡಾ.ಸಿದ್ದರಾಮಯ್ಯ 2021ರ ಅಕ್ಟೋಬರ್ 11ರಂದು ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ್ದ ಪೊಲೀಸರು, ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪದಡಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ 3ನೇ ಎಸಿಎಂಎ ನ್ಯಾಯಾಲಯ 2022ರ ನವೆಂಬರ್ 9ರಂದು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.