ADVERTISEMENT

ಬೆಂಗಳೂರು | ದರ್ಶನ್‌ ಸಾವು ಪ್ರಕರಣ: ವ್ಯಸನ ಮುಕ್ತ ಕೇಂದ್ರದ 8 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 15:52 IST
Last Updated 13 ಜನವರಿ 2026, 15:52 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಅಡಕಮಾರನಹಳ್ಳಿಯ ವ್ಯಸನ ಮುಕ್ತ ಕೇಂದ್ರದಲ್ಲಿ ಯುವಕ ದರ್ಶನ್‌ (23) ಅವರು ಮೃತಪಟ್ಟಿದ್ದ ಪ್ರಕರಣವು ತಿರುವು ಪಡೆದಿದ್ದು, ಕೇಂದ್ರದ ಎಂಟು ಸಿಬ್ಬಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ವ್ಯಸನ ಮುಕ್ತ ಕೇಂದ್ರದ ಉಸ್ತುವಾರಿ ನವೀನ್, ಸಹಾಯಕ ಅಖಿಲ್‌, ಕೆಲಸಗಾರ ನಾರಾಯಣ ಅಲಿಯಾಸ್‌ ನಾಣಿ, ಅಡುಗೆ ಕೆಲಸಗಾರರಾದ ಹಿತೇಶ್ ಕುಮಾರ್, ಮಂಜು, ಸಿಬ್ಬಂದಿಯಾದ ಸಾಹಿಲ್ ಅಹಮ್ಮದ್, ನವೀನ್ ಕುಮಾರ್ ಮತ್ತು ಮೈಸೂರಿನ ರವಿ ಬಂಧಿತರು.

ADVERTISEMENT

ಬಂಧಿತರನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ನ.26ರಂದು ದರ್ಶನ್‌ ಅವರು ಮೃತಪಟ್ಟಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದರು.

ಆರೋಪಿಗಳು, ದರ್ಶನ್‌ ಅವರಿಗೆ ಫೈಬರ್ ಲಾಠಿ, ಪ್ಲಾಸ್ಟಿಕ್‌ ಪೈಪ್‌, ಮರದ ತುಂಡಿನಿಂದ ಥಳಿಸಿದ್ದರು. ವ್ಯಸನ ಮುಕ್ತ ಕೇಂದ್ರದಿಂದ ತೆರಳುವುದಾಗಿ ದರ್ಶನ್‌ ಹೇಳಿದ್ದಕ್ಕೆ ಎಂಟು ಮಂದಿ ಅವರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ನಡೆಸಿದ ಮೂರು ದಿನಗಳ ಬಳಿಕ ಯುವಕ ಮೃತಪಟ್ಟಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

‘ಪೊಲೀಸರ ಹಲ್ಲೆಯಿಂದ ಮಗ ಮೃತಪಟ್ಟಿದ್ದಾನೆ’ ಎಂದು ಈ ಹಿಂದೆ ಪೋಷಕರು ಆರೋಪಿಸಿದ್ದರು. ಅದಾದ ಮೇಲೆ ಇಲಾಖಾ ತನಿಖೆ ಕಾಯ್ದಿರಿಸಿ ವಿವೇಕನಗರ ಠಾಣೆಯ ಇನ್‌ಸ್ಪೆಕ್ಟರ್‌ ಶಿವಕುಮಾರ್ ಹಾಗೂ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿ ನಗರ ಜಂಟಿ ಪೊಲೀಸ್‌ ಕಮಿಷನರ್ ಆದೇಶಿಸಿದ್ದರು. 

ದರ್ಶನ್‌ ಅವರ ತಾಯಿ ಆದಿಲಕ್ಷ್ಮಿ ಅವರು ನೀಡಿದ್ದ ದೂರು ಆಧರಿಸಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಶಿವಕುಮಾರ್, ಸಿಬ್ಬಂದಿ ಪವನ್ ಸೇರಿದಂತೆ ನಾಲ್ವರು ಪೊಲೀಸರು ಹಾಗೂ ಸೋಷಿಯಲ್‌ ಸರ್ವಿಸ್‌ ಕೇಂದ್ರದ ಮಾಲೀಕರ ವಿರುದ್ಧ ಕೊಲೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.