ADVERTISEMENT

ಬೆಂಗಳೂರು | ಬೆಟ್ಟದಾಸನಪುರದಲ್ಲಿ ಪುನರ್ವಸತಿ ಶೀಘ್ರ: ಸಚಿವ ಜಮೀರ್‌ ಅಹಮದ್‌

​ಪ್ರಜಾವಾಣಿ ವಾರ್ತೆ
Published 29 ಮೇ 2025, 15:56 IST
Last Updated 29 ಮೇ 2025, 15:56 IST
ಕೊಳೆಗೇರಿ ಅಭಿವೃದ್ಧಿ ಮಂಡಳಿ ಬೆಟ್ಟದಾಸನಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ಮಾದರಿ
ಕೊಳೆಗೇರಿ ಅಭಿವೃದ್ಧಿ ಮಂಡಳಿ ಬೆಟ್ಟದಾಸನಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ಮಾದರಿ   

ಬೆಂಗಳೂರು: ಪುಟ್ಟೇನಹಳ್ಳಿ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡವರಿಗೆ ಪುನರ್ವಸತಿಗಾಗಿ ಬೆಟ್ಟದಾಸನಪುರದಲ್ಲಿ ಮನೆಗಳನ್ನು ಶೀಘ್ರ ನಿರ್ಮಾಣ ಮಾಡಿಕೊಡಲು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಪ್ರಜಾವಾಣಿ’ಯ ಮೇ 27ರ ಸಂಚಿಕೆಯಲ್ಲಿ ‘ಪುಟ್ಟೇನಹಳ್ಳಿ ಕೆರೆ ಒತ್ತುವರಿ ಹೆಚ್ಚಳ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವಿಶೇಷ ವರದಿಯನ್ನು ಉಲ್ಲೇಖಿಸಿರುವ ಸಚಿವರು, ‘ನಿರ್ಮಾಣ ಕಾರ್ಯವನ್ನು ಕೈಗೊಂಡು, ಆದಷ್ಟು ಬೇಗ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಬೇಕು’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಆದೇಶಿಸಿದ್ದಾರೆ.

ಪುಟ್ಟೇನಹಳ್ಳಿ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡ 118 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಕಂದಾಯ ಇಲಾಖೆ ಬೆಟ್ಟದಾಸನಪುರದ ಸರ್ವೆ ನಂಬರ್‌ 20ರಲ್ಲಿ 2 ಎಕರೆ 24 ಗುಂಟೆ ಜಮೀನನ್ನು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ 2014ರಲ್ಲಿ ಹಸ್ತಾಂತರಿಸಿತ್ತು. ಬಿಬಿಎಂಪಿ ₹ 1 ಕೋಟಿ ಅನುದಾನವನ್ನೂ ನೀಡಿತ್ತು. ಮಂಡಳಿ ಹಲವು ಕಾರಣಗಳಿಂದ ಮನೆಗಳನ್ನು ನಿರ್ಮಿಸಿರಲಿಲ್ಲ. ಇದರಿಂದ ಪುಟ್ಟೇನಹಳ್ಳಿ ಕೆರೆಯಲ್ಲಿ ಒತ್ತುವರಿ ಹೆಚ್ಚಾಗಿತ್ತು. ಈ ಬಗ್ಗೆ ವಿವರವಾದ ವರದಿ ಪ್ರಕಟವಾದ ಬಳಿಕ, ಸಚಿವರು ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ADVERTISEMENT

‘ಪ್ರಧಾನಮಂತ್ರಿ ಆವಾಸ್‌ ಯೋಜನೆಯ– ಸರ್ವರಿಗೂ ಸೂರು ಯೋಜನೆಯಡಿ ಬೆಟ್ಟದಾಸನಪುರದಲ್ಲಿ 10 ಬ್ಲಾಕ್‌ಗಳಲ್ಲಿ ನಾಲ್ಕು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಟೆಂಡರ್‌ ಕರೆದು ಗುತ್ತಿಗೆಯನ್ನೂ ವಹಿಸಲಾಗಿದೆ. ಈ ಹಿಂದೆ ‘ಒತ್ತುವರಿದಾರರು ಶೆಡ್‌ ಬೇಡ, ಮನೆ ಬೇಡ, ನಿವೇಶನ ಬೇಕು’ ಎಂದು ಒತ್ತಾಯಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಕೊನೆಗೆ ಫ್ಲ್ಯಾಟ್‌ಗಳನ್ನು ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ, ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ. ನ್ಯಾಯಾಲಯ, ಲೋಕಾಯುಕ್ತರ ಆದೇಶವೂ ಇದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ‍್ಪ ಅವರು ಶೀಘ್ರವೇ ಭೂಮಿ ಪೂಜೆ ನೆರವೇರಿಸಲಿದ್ದು, ‘ಫಾಸ್ಟ್‌ ಟ್ರ್ಯಾಕ್‌’ ಮಾದರಿಯಲ್ಲಿ ಸುಮಾರು ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಅಶೋಕ್‌ ತಿಳಿಸಿದರು.

ಪರಿಶೀಲಿಸಿ ಕ್ರಮ: ಎಂ. ಕೃಷ್ಣಪ್ಪ

‘ಬೆಟ್ಟದಾಸಪುರದಲ್ಲಿ ನಿರ್ಮಿಸುತ್ತಿರುವ ಮನೆಗಳನ್ನು ನಮ್ಮ ಕ್ಷೇತ್ರದ ಜನರಿಗೆ ಕೊಡಲು ಆದ್ಯತೆ ನೀಡಲಾಗುತ್ತದೆ. ಬೇರೆ ಕ್ಷೇತ್ರದ ಜನರಿಗೆ ಇಲ್ಲಿ ಹೇಗೆ ಕೊಡುವುದು? ಈ ಜಾಗವನ್ನು ಪುಟ್ಟೇನಹಳ್ಳಿ ಕೆರೆಯಲ್ಲಿನ ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸಲೆಂದೇ ಕೊಟ್ಟಿರುವ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.