ADVERTISEMENT

ಬಾಡಿಗೆದಾರರ ಮೇಲೆ ಹಲ್ಲೆ; ಮಾಲೀಕರ ಬಂಧನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 20:00 IST
Last Updated 31 ಅಕ್ಟೋಬರ್ 2020, 20:00 IST

ಬೆಂಗಳೂರು: ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಪೂರ್ಣಿಮಾ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಮಹಾಲಕ್ಷ್ಮಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಮಹಾಲಕ್ಷ್ಮೀ ಅವರಿಗೆ ಹೆಗ್ಗನಹಳ್ಳಿ ಮಾರುತಿ ನಗರದಲ್ಲಿ ಮನೆಗಳು ಇವೆ. ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಆ ಪೈಕಿ ಒಂದು ಮನೆಯಲ್ಲಿ ಪೂರ್ಣಿಮಾ ಹಾಗೂ ಅವರ ಪತಿ ಬಾಡಿಗೆಗೆ ಇದ್ದರು. ₹ 1 ಲಕ್ಷ ಮುಂಗಡ ಹಣ ಕೊಟ್ಟು, ತಿಂಗಳಿಗೆ ₹5,500 ಬಾಡಿಗೆ ಪಾವತಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ಪೂರ್ಣಿಮಾ ದಂಪತಿ, ಎರಡು ತಿಂಗಳಿನಿಂದ ಬಾಡಿಗೆ ಹಣ ಕೊಟ್ಟಿರಲಿಲ್ಲ. ಬಾಡಿಗೆ ಕೇಳಲು ಆಗಾಗ ಮನೆ ಬಳಿ ಬರುತ್ತಿದ್ದ ಮಹಾಲಕ್ಷ್ಮಿ ಗಲಾಟೆ ಮಾಡುತ್ತಿದ್ದರು. ಸ್ಥಳೀಯರು ಸಮಾಧಾನಪಡಿಸಿ ಕಳುಹಿಸಿದ್ದರು.’

ADVERTISEMENT

‘ಶುಕ್ರವಾರ ರಾತ್ರಿ ಮನೆ ಬಳಿ ಬಂದಿದ್ದ ಮಹಾಲಕ್ಷ್ಮೀ, ಮನೆ ಖಾಲಿ ಮಾಡುವಂತೆ ಗಲಾಟೆ ಮಾಡಿದ್ದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದೇ ವೇಳೆಯೇ ಮಹಾಲಕ್ಷ್ಮಿ, ಚಾಕುವಿನಿಂದ ಪೂರ್ಣಿಮಾ ಅವರಿಗೆ ಇರಿದಿದ್ದರು. ಸುತ್ತಿಗೆಯಿಂದ ಹೊಡೆದಿದ್ದರು. ಕುಸಿದು ಬಿದ್ದಿದ್ದ ಪೂರ್ಣಿಮಾ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಸೇರಿಸಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

‘ಕೃತ್ಯದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಮಹಾಲಕ್ಷ್ಮಿ ಅವರನ್ನು ಸ್ಥಳೀಯರೇ ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಗಾಯಾಳು ಪೂರ್ಣಿಮಾ ಅವರ ಸಂಬಂಧಿ ಕಿರಣ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.