ADVERTISEMENT

ಆಭರಣ ಸುಲಿಗೆ: ಮೂವರ ಬಂಧನ

ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮಾಲೀಕರ ಕಟ್ಟಿಹಾಕಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 22 ಮೇ 2022, 19:51 IST
Last Updated 22 ಮೇ 2022, 19:51 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಹೋಗಿ ಮಾಲೀಕರ ಕೈ ಕಾಲು ಕಟ್ಟಿ ಹಾಕಿ ಸುಲಿಗೆ ಮಾಡಿದ್ದ ಮೂವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಟ್ಟೇಗಾರಪಾಳ್ಯದ ನಿವಾಸಿ ಜಿಯಾವುಲ್ಲಾ (36), ನಂದನ್ (27), ಶರತ್ (28) ಬಂಧಿತರು. ಇವರಿಂದ ₹ 1.50 ಲಕ್ಷ ಮೌಲ್ಯದ ಚಿನ್ನದ ಸರ, ಒಲೆ, 2 ದ್ವಿಚಕ್ರ ವಾಹನ, ಮಚ್ಚು, ಅಂಟಿನ ಪಟ್ಟಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತರು ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದರು. ತಂಡ ಕಟ್ಟಿಕೊಂಡು ಕಳ್ಳತನ, ದ್ವಿಚಕ್ರ ವಾಹನ ಕಳವು, ಗಾಂಜಾ ಮಾರಾಟ ಹಾಗೂ ಸುಲಿಗೆ ಮಾಡುತ್ತಿದ್ದರು’ ಎಂದರು.

ADVERTISEMENT

ಫಲಕ ನೋಡಿ ಕೃತ್ಯ: ‘ನಂದಿನಿ ಲೇಔಟ್‌ ನಿವಾಸಿಯಾದ ದೂರುದಾರ ಮಹಿಳೆ, 2ನೇ ಮಹಡಿಯ ಮನೆ ಖಾಲಿ ಇರುವ ಕುರಿತು ‘ಮನೆ ಬಾಡಿಗೆಗೆ ಇದೆ’ ಎಂಬ ಫಲಕ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

‘ಫಲಕ ನೋಡಿದ್ದ ಆರೋಪಿಗಳು, ಮಾಹಿತಿ ಕಲೆಹಾಕಿ ಮನೆಯಲ್ಲಿ ಮಹಿಳೆ ಒಬ್ಬರೇ ಇರುವುದನ್ನು ತಿಳಿದುಕೊಂಡಿದ್ದರು. ಬಾಡಿಗೆಗೆ ಕೇಳುವ ನೆಪದಲ್ಲಿ ಮೇ 9ರಂದು ಹೋಗಿದ್ದರು. ಕೀ ಪಡೆದಿದ್ದ ಆರೋಪಿಗಳು ಕೆಲ ಹೊತ್ತಿನ ನಂತರ ‘ಮನೆ ಗಲೀಜಾಗಿದೆ. ಬಂದು ನೋಡಿ’ ಎಂದಿದ್ದ. ಆತನ ಮಾತು ನಂಬಿದ್ದ ಮಹಿಳೆ, ಮನೆಯೊಳಗೆ ತೆರಳಿದಾಗ ಕೈಕಾಲು ಕಟ್ಟಿ ಕೃತ್ಯ ಸುಲಿಗೆಮಾಡಿದ್ದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.