ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ್, ನಟಿ ಪವಿತ್ರಾಗೌಡ ಸೇರಿ 16 ಆರೋಪಿಗಳು ಇಲ್ಲಿನ 57ನೇ ಎಸಿಎಂಎಂ ನ್ಯಾಯಾಲಯಕ್ಕೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಮೂರನೇ ಆರೋಪಿ ಕೋರ್ಟ್‌ಗೆ ಗೈರಾಗಿದ್ದರು.
ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜುಲೈ 10ಕ್ಕೆ ವಿಚಾರಣೆ ಮುಂದೂಡಿದರು. ಅಂದು ಎಲ್ಲ ಆರೋಪಿಗಳೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದರು.
ಮಂಗಳವಾರ ಬೆಳಿಗ್ಗೆ 11ಕ್ಕೆ ವಿಚಾರಣೆ ನಿಗದಿ ಆಗಿತ್ತು. ಪ್ರಕರಣದ ಸಂಖ್ಯೆಯನ್ನು ಕೋರ್ಟ್ ಸಿಬ್ಬಂದಿ ಕರೆದು ಆರೋಪಿಗಳ ಹಾಜರಾತಿ ಖಚಿತಪಡಿಸಿಕೊಂಡರು. ವಿಚಾರಣೆ ವೇಳೆ ಒಂದನೇ ಆರೋಪಿ ಪವಿತ್ರಾಗೌಡ ಅವರಿಂದ ದರ್ಶನ್ ದೂರ ನಿಂತಿದ್ದರು. ಆಗ ನ್ಯಾಯಾಧೀಶರು, ಒಂದನೇ ಆರೋಪಿ ಪಕ್ಕ ನಿಲ್ಲುವಂತೆ ದರ್ಶನ್‌ಗೆ ಸೂಚಿಸಿದರು.
‘ನಿಮ್ಮ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302, 34, 120(ಬಿ), 355, 143, 147ರ ಅಡಿ ಪ್ರಕರಣ ದಾಖಲಾಗಿದ್ದು, ಇದನ್ನು ಒಪ್ಪಿಕೊಳ್ಳುವಿರಾ’ ಎಂದು ನ್ಯಾಯಾಧೀಶರು ಕೇಳಿದರು. ‘ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಆರೋಪಿಗಳು ಹೇಳಿದರು. ನಂತರ, ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.
ಕೋರ್ಟ್ ಹಾಲ್‌ನಿಂದ ಹೊರಗೆ ಬರುತ್ತಿರುವಾಗ ಪವಿತ್ರಾ ಅವರು ದರ್ಶನ್ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು ಎಂದು ಗೊತ್ತಾಗಿದೆ.
ಏಪ್ರಿಲ್ 8ರಂದು ಇದೇ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆಗೆ ದರ್ಶನ್ ಅವರು ಗೈರಾಗಿದ್ದರು. ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯವು ಆರೋಪಿಗಳು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ದರ್ಶನ್ ಪರ ವಕೀಲರಿಗೆ ಸೂಚಿಸಿತ್ತು.
2024ರ ಜೂನ್ 8ರಂದು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಸ್ವಾಮಿ ಅವರ ಕೊಲೆ ನಡೆದಿತ್ತು. ಕೊಲೆಯ ಆರೋಪದ ಮೇರೆಗೆ ದರ್ಶನ್, ಪವಿತ್ರಾಗೌಡ ಅವರನ್ನು ಜೂನ್ 11ರಂದು ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.