ADVERTISEMENT

ರೇಣುಕಸ್ವಾಮಿ ಪ್ರಕರಣ|ನ್ಯಾಯಾಲಯಕ್ಕೆ ಇಬ್ಬರು ಆರೋಪಿಗಳ ಗೈರು: ವಿಚಾರಣೆ ಮುಂದೂಡಿಕೆ

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 14:10 IST
Last Updated 19 ಸೆಪ್ಟೆಂಬರ್ 2025, 14:10 IST
ರೇಣುಕಸ್ವಾಮಿ
ರೇಣುಕಸ್ವಾಮಿ   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ದೋಷಾರೋಪಣೆ ನಿಗದಿ ಕುರಿತ ವಿಚಾರಣೆಯನ್ನು 57ನೇ ಸಿಸಿಎಚ್‌ ನ್ಯಾಯಾಲಯವು ಸೆ.25ಕ್ಕೆ ಮುಂದೂಡಿದೆ.

ದೋಷಾರೋಪಣೆ ನಿಗದಿ ಸಂಬಂಧ ವಿಚಾರಣೆಯು ಶುಕ್ರವಾರ ನಡೆಯಬೇಕಿತ್ತು. ಆದರೆ, ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ವಿಚಾರಣೆಯನ್ನು ಮುಂದೂಡಿ, ಆದೇಶಿಸಿತು.

ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ ಹಾಗೂ ಪವಿತ್ರಾಗೌಡ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಇಬ್ಬರನ್ನೂ ವಿಡಿಯೊ ಕಾನ್ಫರೆನ್ಸ್ ಮೂಲಕ ಶುಕ್ರವಾರ ಬೆಳಿಗ್ಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.‌ ಪವಿತ್ರಾಗೌಡ ಪರ ವಕೀಲರು ತಮ್ಮ ಕಕ್ಷಿದಾರರ ಪರ ದೋಷಾರೋಪಣೆ ನಿಗದಿಗೆ ಮನವಿ ಸಲ್ಲಿಸಿದರು. ಆದರೆ ಆರೋಪಿಗಳಾದ ಕಾರ್ತಿಕ್ ಹಾಗೂ ಕೇಶವಮೂರ್ತಿ ಗೈರಾಗಿದ್ದರಿಂದ ನ್ಯಾಯಾಲಯ ವಿಚಾರಣೆ ಮುಂದೂಡಿತು.

ADVERTISEMENT

ದರ್ಶನ್​ ಅವರಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ಒದಗಿಸಿಲ್ಲ ಎಂದು ಅವರ ಪರ ವಕೀಲರ ಆರೋಪದ ಕುರಿತು ಜೈಲಿನ ಅಧಿಕಾರಿಗಳಿಂದ ನ್ಯಾಯಾಧೀಶರು ವಿವರಣೆ ಕೇಳಿದರು. ಜೈಲಿನ ಕೈಪಿಡಿಯಂತೆಯೇ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಬ್ಯಾರಕ್‌ ಎದುರು ನಡೆದಾಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ನ್ಯಾಯಾಧೀಶರ ಆದೇಶವನ್ನು ಲಘುವಾಗಿ ಪರಿಗಣಿಸಿದ್ದಾರೆ. ದರ್ಶನ್ ಬಂಧನವಾಗಿ 32 ದಿನ ಕಳೆದಿದೆ. ಜೈಲಿನ ನಿಯಮದ ಪ್ರಕಾರ ವಿಚಾರಣಾಧೀನ ಕೈದಿಯನ್ನು 14 ದಿನ ಕ್ವಾರಂಟೈನ್‌ಗೆ ಒಳಪಡಿಸಬೇಕು. ಆದರೆ, ಒಂದು ತಿಂಗಳು ಅಲ್ಲೇ ಇರಿಸಿದ್ದಾರೆ. ಅದು ಕಾನೂನುಬಾಹಿರ. ಪಕ್ಕದ ಬ್ಯಾರಕ್‌ನಲ್ಲಿ ಶಂಕಿತ ಉಗ್ರರಿದ್ದು, ಅವರಿಗೆ ಚೆಸ್, ಕೇರಂ ಬೋರ್ಡ್, ಟಿ.ವಿ ಸೇರಿ ಐಷಾರಾಮಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕೊಲೆ ಪ್ರಕರಣದ ಆರೋಪಿಗೆ ಮೂಲಸೌಲಭ್ಯ ಒದಗಿಸಿಲ್ಲ. ಭದ್ರತೆಯ ನೆಪದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ, ಕಿರುಕುಳ ನೀಡಲಾಗುತ್ತಿದೆ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ’ ಎಂದು ದರ್ಶನ್ ಪರ ವಕೀಲರು ಸೆ.17ರಂದು ನಡೆದಿದ್ದ ವಿಚಾರಣೆ ವೇಳೆ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.

‘ಕೋರ್ಟ್ ಆದೇಶದಂತೆ ಜೈಲಿನ ಕೈಪಿಡಿ ಪ್ರಕಾರ ಮೂಲಸೌಕರ್ಯ ಒದಗಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ 30 ನಿಮಿಷ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಸಿಗೆ, ಹೊದಿಕೆ, ಮಗ್ ಸೇರಿ ಎಲ್ಲವನ್ನೂ ಕೊಡಲಾಗಿದೆ. ಕುಟುಂಬದವರ ಭೇಟಿಗೂ ಅವಕಾಶ ನೀಡಲಾಗಿದೆ. ಜೈಲಿನ ನಿಯಮಾವಳಿ ಪ್ರಕಾರವೇ ದರ್ಶನ್ ಅವರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ’ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.