ADVERTISEMENT

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವರದಿ ಸುಳ್ಳು: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 7:42 IST
Last Updated 19 ಡಿಸೆಂಬರ್ 2019, 7:42 IST
   

ಬೆಂಗಳೂರು: ‘2018ರಲ್ಲಿ ರಾಜ್ಯದಾದ್ಯಂತ 113 ಪ್ರಕರಣಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿವೆ ಎಂಬ ಕೇಂದ್ರ ಸರ್ಕಾರದ ವರದಿ ಸುಳ್ಳು. ಅಂತಹ ಯಾವ ಘಟನೆಗಳೂ ನಡೆದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೌಖಿಕ ಸ್ಪಷ್ಟನೆ ನೀಡಿದೆ.

ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಅಚ್ಚಪ್ಪ ಅವರು, ‘ಈ ಸಂಬಂಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿರುವ ವರದಿ ಸುಳ್ಳು. ಎಲ್ಲೂ ಅಂತಹ ಘಟನೆ ನಡೆದಿಲ್ಲ ಅಂತಹ ಯಾವ ದೂರೂ ದಾಖಲಾಗಿಲ್ಲ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಮ ಹೇಳಿಕೆಯನ್ನು ಒಪ್ಪಲು ಆಗುವುದಿಲ್ಲ. ಈ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿ’ ಎಂದು ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿದೆ.

ಕೋರಿಕೆ ಏನು?: ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ದೂರು ದಾಖಲಿಸಿಕೊಳ್ಳಲು ಸೈಬರ್ ಕ್ರೈಂ ನಿಗಾ ವಹಿಸಬೇಕು. ಇದಕ್ಕಾಗಿ ತರಬೇತಿ ಪಡೆದ ಪ್ರತ್ಯೇಕ ಪೊಲೀಸರನ್ನು ನಿಯೋಜಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಈ ಅರ್ಜಿಗಳನ್ನು, ‘ಬಚಪನ್ ಬಚಾವೊ’ ಸ್ವಯಂ ಸೇವಾ ಸಂಸ್ಥೆ(ಎನ್‌ಜಿಒ) ಸಲ್ಲಿಸಿದೆ.ಹೈಕೋರ್ಟ್‌ ಸಹ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.