ADVERTISEMENT

ಬೆಂಗಳೂರು: ನಗರದ ವಿವಿಧೆಡೆ ಗಣರಾಜ್ಯೋತ್ಸವ ಸಂಭ್ರಮ

ಕೋವಿಡ್‌ನಿಂದಾಗಿ ನಡೆಯದ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 1:40 IST
Last Updated 27 ಜನವರಿ 2022, 1:40 IST
ಅಪಘಾತ ರಹಿತ ಚಾಲನೆ ಮಾಡಿದ ಕೆಎಸ್‌ಆರ್‌ಟಿಸಿ ಚಾಲಕರನ್ನು ಗಣರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಹಾಗೂ ಅಧಿಕಾರಿಗಳು ಹಾಜರಿದ್ದರು
ಅಪಘಾತ ರಹಿತ ಚಾಲನೆ ಮಾಡಿದ ಕೆಎಸ್‌ಆರ್‌ಟಿಸಿ ಚಾಲಕರನ್ನು ಗಣರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಹಾಗೂ ಅಧಿಕಾರಿಗಳು ಹಾಜರಿದ್ದರು   

ಬೆಂಗಳೂರು: ಕೋವಿಡ್ ಮೂರನೇ ಅಲೆ ಆತಂಕದ ನಡುವೆಯೂ 73ನೇ ಗಣರಾಜ್ಯೋತ್ಸವವನ್ನು ನಗರದಲ್ಲಿ ಸಡಗರದಿಂದ ಆಚರಿಸಲಾಯಿತು.

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬಿಬಿಎಂಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮತ್ತು ಪಥ ಸಂಚಲನಕ್ಕೆ ಸೀಮಿತವಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ.

ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ, ಲಾಲ್ ಬಾಗ್ ನಡಿಗೆದಾರರ ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತು, ಕೆಎಸ್‌ಆರ್‌ಟಿಸಿ ಸೇರಿ ಹಲವೆಡೆ ಗಣರಾಜ್ಯೋತ್ಸವ ಆಚರಿಸಲಾಯಿತು.

ADVERTISEMENT

ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ ಕಬನ್‌ ಪಾರ್ಕ್‌ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ 2022ನೇ ಸಾಲಿನ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಸಂಘದ ಅಧ್ಯಕ್ಷ ಎಸ್. ಉಮೇಶ್, ನಟಿ ಸೋನಿಕಾ ಗೌಡ, ಐಎಎಸ್ ಅಧಿಕಾರಿ ರಾಜೇಂದರ್‌ಕುಮಾರ್ ಕಟಾರಿಯಾ ಇದ್ದರು.

ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಧ್ವಜಾರೋಹಣ ನೆರವೇರಿಸಿದರು.

ಬೆಂ.ವಿ.ವಿಯಲ್ಲಿ ಗಣರಾಜ್ಯೋತ್ಸವ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರು ಸೇರಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚನೆ ಸಮಿತಿ ಸದಸ್ಯರ ಕೊಡುಗೆ ಅಪಾರ’ ಎಂದು ಬಣ್ಣಿಸಿದರು.

‘ಮೂಲ ಸಂವಿಧಾನ ಜಾರಿಗೆ ತನ್ನಿ’

ಕೆ.ಆರ್.ಪುರ: ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಯಾವುದೇ ತಿದ್ದುಪಡಿ ಮಾಡದೆ ಮೂಲ ಸಂವಿಧಾನವನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ ಒತ್ತಾಯಿಸಿದರು.

ಟೀನ್ ಫ್ಯಾಕ್ಟರಿ ಬಳಿಯ ಕರ್ನಾಟಕ ಸಮತ ಸೈನಿಕ ದಳದ ಕಚೇರಿಯಲ್ಲಿ ಆಯೋಜಿಸಿದ್ದ ‘ಸಂವಿಧಾನ ಜಾರಿಗೆ ಬಂದ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ರಚನೆ ಮಾಡಿ 73 ವರ್ಷಗಳು ಕಳೆದಿವೆ. ಸರ್ಕಾರಗಳು ಸಂವಿಧಾನವನ್ನ ತಮಗೆ ಇಷ್ಟ ಬಂದಂತೆ ತಿದ್ದುಪಡಿ ಮಾಡಿಕೊಂಡು ಆಡಳಿತವನ್ನು ನಡೆಸುತ್ತಿವೆ. ಮೂಲ ಸಂವಿಧಾನ ಜಾರಿಗೆ ಬಂದಿದ್ದರೆ 10 ವರ್ಷಗಳಲ್ಲಿ ಭಾರತವು ಅಮೆರಿಕದಂತೆ ಅಭಿವೃದ್ಧಿಯಾಗುತ್ತಿತ್ತು ಎಂದು ಹೇಳಿದರು.

ಗಣರಾಜ್ಯೋತ್ಸವ ವೈಮಾನಿಕ ಪ್ರದರ್ಶನದಲ್ಲಿ ‘ರೇವಾ’ ವಿದ್ಯಾರ್ಥಿ

ಬೆಂಗಳೂರು: ದೆಹಲಿಯಲ್ಲಿ ಬುಧವಾರ (ಜ.26) ನಡೆದ ಗಣರಾಜ್ಯೋತ್ಸವ ವಿಶೇಷ ವೈಮಾನಿಕ ಪ್ರದರ್ಶನದಲ್ಲಿ ರೇವಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಕೆ.ನಿತೀಶ್‌ ಕುಮಾರ್ ಭಾಗವಹಿಸಿದ್ದರು.

ಈ ಪ್ರದರ್ಶನದಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ‘75’ ಸಂಖ್ಯೆಯನ್ನು ಆಕಾಶದಲ್ಲಿ ಮೂಡಿಸಿದ್ದವು. ಇದೇ ತಂಡದಲ್ಲಿ ನಿತೀಶ್ ಕುಮಾರ್ ಸಹ ವಿಮಾನವೊಂದರ ಪೈಲಟ್‌ ಆಗಿದ್ದರು. ನಿತೀಶ್‌ 2016ರಲ್ಲಿ ರೇವಾ ಸಂಸ್ಥೆಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿದ್ದರು. ರೇವಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಸ್ಕ್ವಾಡ್ರನ್‌ ಲೀಡರ್ ನೇಹಾ ಯಾದವ್, ಕುಟ್ಟಪ್ಪ ಅವರೂ ಕಳೆದ ವರ್ಷದ ಗಣರಾಜ್ಯೋತ್ಸವ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ರೇವಾ ವಿಶ್ವವಿದ್ಯಾಲಯದ ಕುಲಪತಿ ಪಿ.ಶ್ಯಾಮರಾಜು,‘ನಮ್ಮ ಸಂಸ್ಥೆಗೆ ಇದು ಅತ್ಯಂತ ಹೆಮ್ಮೆಯ ಕ್ಷಣ. ಹಳೆಯ ವಿದ್ಯಾರ್ಥಿಗಳು ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.