ADVERTISEMENT

ಪಿಯುಸಿ: ಮೌಲ್ಯಮಾಪನ ಸಂಭಾವನೆ ಬಿಡುಗಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 14:55 IST
Last Updated 26 ಜುಲೈ 2020, 14:55 IST

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಮುಗಿದು, ಫಲಿತಾಂಶ ಪ್ರಕಟವಾಗಿದ್ದರೂ ಮೌಲ್ಯಮಾಪಕರಿಗೆ ಸಂಭಾವನೆ ನೀಡಿಲ್ಲ. ಕೂಡಲೇ ಸಂಭಾವನೆ ಬಿಡುಗಡೆ ಮಾಡಬೇಕು’ ಎಂದು ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

‘ಸೋಂಕು ಹರಡುವ ಭೀತಿಯ ನಡುವೆಯೂ ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗಿದ್ದಾರೆ. ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರು ಸಂಕಷ್ಟದ ನಡುವೆಯೂ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ಎಂ.ಪಿ. ಕರಬಸಪ್ಪ ಹೇಳಿದ್ದಾರೆ.

‘ಮೌಲ್ಯಮಾಪನ ಸಂಭಾವನೆ ಪಾವತಿಯನ್ನೂ ಆರ್ಥಿಕ ಸುಧಾರಣೆಗಳ ಪ್ರಕ್ರಿಯೆ ಅಥವಾ ಕೆ2 ವ್ಯವಸ್ಥೆ ಅಡಿ ತರಲಾಗಿದೆ. ಈ ವ್ಯವಸ್ಥೆಯಲ್ಲಿ ಆನ್‌ಲೈನ್‌ ಮೂಲಕವೇ ಸಂಭಾವನೆ ಪಾವತಿಸಬೇಕಾಗಿರುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ಕೆ2 ವ್ಯವಸ್ಥೆಯಿಂದ ವಿನಾಯಿತಿ ನೀಡಿ, ಮೊದಲಿನಂತೆ ಚೆಕ್‌ ಮೂಲಕವೇ ಸಂಭಾವನೆ ಪಾವತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.