ADVERTISEMENT

ಮನೆಯೂ ಇಲ್ಲ, ಹಣವೂ ಇಲ್ಲ

ಬಾಡಿಗೆ–ಇಎಂಐ ಕಟ್ಟುವ ಸಂಕಷ್ಟದಲ್ಲಿ ಗ್ರಾಹಕರು * ಡೆವಲಪರ್‌ಗಳ ವಿರುದ್ಧ ಖರೀದಿದಾರರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 20:16 IST
Last Updated 24 ಆಗಸ್ಟ್ 2020, 20:16 IST
   

ಬೆಂಗಳೂರು:'ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಅಡಿ ನೋಂದಾಯಿಸಿದ ಯೋಜನೆಗಳು ಗಡುವಿನೊಳಗೆ ಮುಗಿಯುತ್ತಿಲ್ಲ. ಕೋಟಿಗಟ್ಟಲೇ ಹಣ ಕಟ್ಟಿ, ಮೂರು ವರ್ಷಗಳಿಂದ ಕಾಯುತ್ತಿದ್ದೇವೆ. ಬಿಲ್ಡರ್‌ಗಳು ಮನೆಯೂ ಕೊಡುತ್ತಿಲ್ಲ, ಕಾನೂನಿನ ಪ್ರಕಾರ ಪರಿಹಾರವನ್ನು ನೀಡುತ್ತಿಲ್ಲ‘ ಎಂದು ಖರೀದಿದಾರರು ದೂರುತ್ತಿದ್ದಾರೆ.

‘ರಾಜ್ಯದಲ್ಲಿ ಅನೇಕ ಬಿಲ್ಡರ್‌ಗಳು ಸಮಯದೊಳಗೆ ಗ್ರಾಹಕರಿಗೆ ಮನೆಗಳನ್ನು ಕೊಡುತ್ತಿಲ್ಲ. ದುಡ್ಡು ಕಟ್ಟಿಸಿಕೊಂಡು ಅಲೆದಾಡಿಸುತ್ತಿದ್ದಾರೆ. ಮನೆಗಳನ್ನು ನೀಡಲು ವಿಳಂಬವಾದರೆ, ಕಟ್ಟಿದ ಹಣಕ್ಕೆ ಬಡ್ಡಿ ನೀಡಬೇಕು ಎಂದು ಕಾನೂನಿನಲ್ಲಿಯೇ ಇದೆ. ಇದನ್ನೂ ಪಾಲಿಸುತ್ತಿಲ್ಲ. ರೇರಾ ಬಿಲ್ಡರ್‌ಗಳ ಹಿತ ಕಾಯುತ್ತಿದೆ’ ಎಂದು ಖರೀದಿದಾರರ ಹಕ್ಕುಗಳ ಹೋರಾಟಗಾರ ಎಂ.ಎಸ್. ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೇರಾ ನೋಂದಾಯಿತ 800ಕ್ಕೂ ಹೆಚ್ಚು ಯೋಜನೆಗಳು ಅವಧಿಯೊಳಗೆ ಪೂರ್ಣಗೊಂಡಿಲ್ಲ. ಇದಲ್ಲದೆ, ರೇರಾ ನೋಂದಾಯಿತವಲ್ಲದ ಅನೇಕ ಬಿಲ್ಡರ್‌ಗಳ ಸಾವಿರಾರು ಯೋಜನೆಗಳು ಕೂಡ ಮುಗಿದಿಲ್ಲ. ಅಧಿಕಾರಿಗಳ ವಿಳಂಬ ನೀತಿ, ಬಿಲ್ಡರ್‌ಗಳ ಬೇಜವಾಬ್ದಾರಿ ನಡುವೆ ಗ್ರಾಹಕರು ಪರದಾಡುತ್ತಿದ್ದಾರೆ’ ಎಂದರು.

ADVERTISEMENT

‘ಕನಕಪುರ ರಸ್ತೆಯ ಡೆವಲಪರ್ ಒಬ್ಬರಿಗೆ 2014ರಲ್ಲಿ ಹಣ ಕಟ್ಟಿದ್ದೆ. 2017ರಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಆದರೆ, ಈವರೆಗೆ ಮನೆ ಕೊಟ್ಟಿಲ್ಲ. ಈಗಾಗಲೇ ₹90 ಲಕ್ಷಕ್ಕೂ ಹೆಚ್ಚು ಹಣವನ್ನು ಪಾವತಿಸಿದ್ದೇನೆ. ಅದಕ್ಕೆ ಬಡ್ಡಿಯೂ ಕೊಟ್ಟಿಲ್ಲ’ ಎಂದು ಖರೀದಿದಾರ ಸಂತೋಷ ಪಾಟೀಲ ದೂರಿದರು.

‘ಅವಧಿಯೊಳಗೆ ಮನೆ ನೀಡದ ಕಾರಣ ನೋಂದಣಿಯನ್ನು ರದ್ದು ಮಾಡುವಂತೆ 2020ರ ಜನವರಿಯಲ್ಲಿ ರೇರಾಗೆ ದೂರು ನೀಡಿದ್ದೆವು. ಆದರೆ, ಗ್ರಾಹಕರ ಅಭಿಪ್ರಾಯವನ್ನು ಪಡೆಯದೆ, 2021ರವರೆಗೆ ಸಮಯವನ್ನು ವಿಸ್ತರಿಸಿದೆ. ಯಾವ ಅಧಾರದ ಮೇಲೆ ಸಮಯಾವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿದರೆ, ರೇರಾ ಅಧಿಕಾರಿಗಳು ಉತ್ತರಿಸುತ್ತಿಲ್ಲ’ ಎಂದು ಹೇಳಿದರು.

‘ವೈಟ್‌ಫೀಲ್ಡ್‌ ಬಳಿ ಸ್ಕೈಲಾರ್ಕ್‌ ಇಥಕ್ಕಾ ಪ್ರಾಜೆಕ್ಟ್‌ ಅಡಿ ನಾನು ಆಸ್ತಿ ಖರೀದಿಸಿದ್ದೆ. 2017ರಲ್ಲಿ ಈ ಯೋಜನೆ ರೇರಾದಲ್ಲಿ ನೋಂದಣಿಯಾಗಿದೆ. ಒಪ್ಪಂದದ ಪ್ರಕಾರ 2017ರ ಮಾರ್ಚ್‌ಗೆ ಮನೆ ನೀಡಬೇಕಿತ್ತು. ಆದರೆ, ಈವರೆಗೆ ಕೊಟ್ಟಿಲ್ಲ. 347ಕ್ಕೂ ಹೆಚ್ಚು ಜನರು ಪ್ರಮೋಟರ್‌ ವಿರುದ್ಧ ರೇರಾಗೆ ದೂರು ನೀಡಿದ್ದಾರೆ. ಪರಿಹಾರ ನೀಡುವಂತೆ ರೇರಾ ಆದೇಶಿಸಿದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಖರೀದಿದಾರ ಕೃಷ್ಣನ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.