ADVERTISEMENT

ನೀರಿನ ಬವಣೆ ಪರಿಹರಿಸಿ: ಪರಿ ಪರಿ ಯಾಚನೆ

ಹೆಚ್ಚುತ್ತಿದೆ ಮಾದಕ ದ್ರವ್ಯ ಸೇವನೆ ವ್ಯಸನ– ದಂಗಾದ ಜನ * ಸಂಚಾರ ದಟ್ಟಣೆಗೆ ಬೇಕಿದೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 21:18 IST
Last Updated 15 ಫೆಬ್ರುವರಿ 2020, 21:18 IST
ಸಿ.ಆರ್‌.ಲಕ್ಷ್ಮೀನಾರಾಯಣ ಮಾತನಾಡಿದರು. ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ.ದಿವಾಕರ್‌, ಆರೋಗ್ಯಾಧಿಕಾರಿ ಸಿದ್ಧಪ್ಪಾಜಿ, ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ, ಪೂರ್ವ ವಲಯದ ಡಿಸಿಪಿ ಎಸ್‌.ಡಿ.ಶರಣಪ್ಪ ಹಾಗೂ ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ರವೀಂದ್ರ ಕುಮಾರ್‌ ಮತ್ತಿತರರು ಇದ್ದಾರೆ   –ಪ್ರಜಾವಾಣಿ ಚಿತ್ರಗಳು
ಸಿ.ಆರ್‌.ಲಕ್ಷ್ಮೀನಾರಾಯಣ ಮಾತನಾಡಿದರು. ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ.ದಿವಾಕರ್‌, ಆರೋಗ್ಯಾಧಿಕಾರಿ ಸಿದ್ಧಪ್ಪಾಜಿ, ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ, ಪೂರ್ವ ವಲಯದ ಡಿಸಿಪಿ ಎಸ್‌.ಡಿ.ಶರಣಪ್ಪ ಹಾಗೂ ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ರವೀಂದ್ರ ಕುಮಾರ್‌ ಮತ್ತಿತರರು ಇದ್ದಾರೆ –ಪ್ರಜಾವಾಣಿ ಚಿತ್ರಗಳು   
""

ಬೆಂಗಳೂರು: ನಾವು ಹುಟ್ಟಿ ಬೆಳೆದದ್ದೇ ದೊಮ್ಮಲೂರಿನಲ್ಲಿ. ಇದುವರೆಗೂ ಕುಡಿಯುವ ನೀರಿಗಾಗಿ ಇಷ್ಟೊಂದು ತತ್ವಾರ ಎದುರಿಸಿಲ್ಲ. ಕಳೆದ ಒಂದೆರಡು ವರ್ಷಗಳಲ್ಲಿ ಈ ಸಮಸ್ಯೆ ತೀವ್ರವಾಗಿ ಹೆಚ್ಚಿದೆ. ದಯವಿಟ್ಟು ಈ ಬವಣೆ ನೀಗಿಸಿ...

ದೊಮ್ಮಲೂರು ವಾರ್ಡ್‌ನ ನಿವಾಸಿಗಳು ಪರಿ ಪರಿಯಾಗಿ ಬೇಡಿಕೊಂಡಿದ್ದು ಹೀಗೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪ‍ತ್ರಿಕೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮವು ಈ ವಾರ್ಡ್‌ನ ಜನರ ಪ್ರಮುಖ ಸಮಸ್ಯೆಗಳ ತೀವ್ರತೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಸುವಲ್ಲಿ ನೆರವಾಯಿತು.

ಕುಡಿಯುವ ನೀರಿನ ಸಮಸ್ಯೆ ಕುರಿತಾಗಿಯೇ 37 ಮಂದಿ ಅಳಲು ತೋಡಿಕೊಂಡರು. ‘ದಿನದಲ್ಲಿ ಎರಡು ತಾಸು ನೀರು ಪೂರೈಕೆ ಮಾಡಿದರೂ ಸಾಕು. ನಾವಿಷ್ಟೇ ಕೇಳಿಕೊಳ್ಳುವುದು’ ಎಂದು ಎಂಐಜಿ ಅಪಾರ್ಟ್‌ಮೆಂಟ್‌ ಸಮುಚ್ಚಯ,ಬಿಡಿಎ ಬಡಾವಣೆ, ದೊಮ್ಮಲೂರು ಬಡಾವಣೆಗಳ ನಿವಾಸಿಗಳು ಒತ್ತಾಯಿಸಿದರು.

ADVERTISEMENT

ಇದಕ್ಕೆ ದನಿಗೂಡಿಸಿದ ಪಾಲಿಕೆ ಸದಸ್ಯ ಸಿ.ಆರ್‌.ಲಕ್ಷ್ಮೀನಾರಾಯಣ, ‘ವಾರ್ಡ್‌ನಲ್ಲಿ ಬೇರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ದೂರುಗಳಿಲ್ಲ. ಕೇಂದ್ರ ಪ್ರದೇಶದ ಈ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇರಲೇಬಾರದು. ಮನೆಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ ಅದಕ್ಕೆ ಪೂರಕವಾಗಿ ನೀರು ಪೂರೈಕೆ ಹೆಚ್ಚುತ್ತಿಲ್ಲ. ಈ ಕೊರತೆ ನೀಗಿಸಬೇಕು’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ರವೀಂದ್ರಕುಮಾರ್‌, ‘ಪ್ರತಿಯೊಂದು ದೂರನ್ನೂ ಪರಿಶೀಲಿಸುತ್ತೇವೆ. ಸಮಸ್ಯೆ ಇರುವ ಪ್ರದೇಶಗಳಿಗೆ ಸೋಮವಾರದಿಂದಲೇ ಖುದ್ದಾಗಿ ಭೇಟಿ ನೀಡಿ, ಅದರ ನಿವಾರಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

‘ಸೊಳ್ಳೆಗಳ ನಿಯಂತ್ರಣಕ್ಕೆ ಸ್ಪ್ರೇಯಿಂಗ್‌ ಹಾಗೂ ಫಾಗಿಂಗ್‌ ಸರಿಯಾಗಿ ನಡೆಯುತ್ತಿಲ್ಲ’ ಎಂದು ಅನೇಕರು ದೂರಿದರು. ‘ಫಾಗಿಂಗ್‌ ಹಾಗೂ ಸ್ಪ್ರೇಯಿಂಗ್‌ಗಾಗಿ ಬಂದವರು ಸ್ಥಳೀಯರಿಂದ ಸಹಿ ಪಡೆಯುವಂತೆ ಸೂಚಿಸುತ್ತೇನೆ’ ಎಂದು ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ಭರವಸೆ ನೀಡಿದರು.

‘ಮೂರು ತಿಂಗಳಿನಿಂದ ಡೆಂಗಿ ಪ್ರಕರಣವೂ ಪತ್ತೆಯಾಗಿಲ್ಲ’ ಎಂದು ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಸಂಘಮಿತ್ರ ತಿಳಿಸಿದರು.

ಬೆಸ್ಕಾಂನವರು ಮರದ ಕೊಂಬೆ ಕಡಿದು ಕಸವನ್ನು ಅಲ್ಲೇ ಬಿಡುತ್ತಾರೆ ಎಂದು ಕೆಲವರು ದೂರಿದರು. ‘ಈ ವಾರ್ಡ್‌ನಲ್ಲಿ ವಿದ್ಯುತ್‌ ನಿರೋಧಕ ಕವಚವಿರುವ ತಂತಿಗಳನ್ನು ಅಳವಡಿಸಿದ್ದೇವೆ. ವಿದ್ಯುತ್ ಕೇಬಲ್‌ಗಳನ್ನು ನೆಲದಡಿಯಲ್ಲಿ ಅಳವಡಿಸುತ್ತಿದ್ದೇವೆ. ಇನ್ನು ಕಸದ ಸಮಸ್ಯೆ ಉದ್ಭವಿಸುವುದೇ ಇಲ್ಲ’ ಎಂದು ಬೆಸ್ಕಾಂನ ಎಇಇ ಮಂಜುನಾಥ್‌ ಭರವಸೆ ನೀಡಿದರು.

ಕಾಂಕ್ರೀಟ್‌ ಕಂಬಗಳ ಬದಲು ಉಕ್ಕಿನ ಕಂಬಗಳನ್ನು ಅಳವಡಿಸಿ, ಅದರಲ್ಲಿ ಎಲ್‌ಇಡಿ ಬೀದಿದೀಪ ಜೋಡಿಸುವ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ನೆರವು ಒದಗಿಸುವಂತೆ ಅವರು ಪಾಲಿಕೆ ಸದಸ್ಯರನ್ನು ಕೋರಿದರು.

ತಿಂಗಳಿಗೆ ಎರಡು ಸಭೆ: ಈ ಹಿಂದೆ ಪೊಲೀಸ್‌ ಠಾಣೆಗಳಲ್ಲಿ ಸ್ಥಳೀಯ ಪ್ರಮುಖರ ಸಭೆ ನಡೆಸಲಾಗುತ್ತಿತ್ತು. ಈ ಪರಿಪಾಠ ನಿಂತೇ ಹೋಗಿದೆ ಎಂದು ಕೆಲವರು ಗಮನ ಸೆಳೆದರು.

ಪೂರ್ವ ವಲಯದ ಡಿಸಿಪಿ ಎಸ್‌.ಡಿ.ಶರಣಪ್ಪ, ‘ಪೊಲೀಸ್‌ ಗಸ್ತು ವ್ಯವಸ್ಥೆಯಲ್ಲಿ ಅನೇಕ ಸುಧಾರಣೆ ತರಲಾಗಿದೆ. ಪ್ರತಿ ತಿಂಗಳು ಬಡಾವಣೆ ಮಟ್ಟದಲ್ಲಿ ತಿಂಗಳಿಗೆ ಎರಡು ಸಭೆ ನಡೆಸುವ ಪ್ರಸ್ತಾಪವಿದ್ದು, ಶೀಘ್ರವೇ ಜಾರಿಯಾಗಲಿದೆ’ ಎಂದರು.

ಗಾಂಜಾ ಹಾವಳಿ ಹೆಚ್ಚುತ್ತಿರುವ ಬಗ್ಗೆ ವಿ.ಮುನಿಸ್ವಾಮಿ ಗಮನ ಸೆಳೆದರು. ‘ಗಾಂಜಾ ಮಾರಾಟ ಜಾಲ ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಬಗ್ಗೆ ಯಾವುದೇ ಸುಳಿವಿದ್ದರೂ ಗಮನಕ್ಕೆ ತನ್ನಿ, ಅಂತಹವರ ಮೇಲೆ ಇಲಾಖೆ ಕಣ್ಣಿಡುತ್ತದೆ’ ಎಂದು ಶರಣಪ್ಪ ಭರವಸೆ ನೀಡಿದರು.

ಕಾರ್ಪೊರೇಟರ್‌ ಪತ್ನಿಗೂ ನೀರಿನ ಬವಣೆ:ನೀರು ಪೂರೈಕೆ ಅವ್ಯವಸ್ಥೆ ಬಗ್ಗೆ ಸ್ವತಃ ಪಾಲಿಕೆ ಸದಸ್ಯ ಲಕ್ಷ್ಮೀನಾರಾಯಣ ಅವರ ಪತ್ನಿ ಪ್ರಭಾವತಿ ಅವರೇ ಅಳಲು ತೋಡಿಕೊಂಡರು.

‘ನೀರು ಬಾರದ ಕಾರಣ ನಾನೇ ಎಷ್ಟೋ ಬಾರಿ ಪಕ್ಕದ ಮನೆಯಿಂದ ಬಕೆಟ್‌ನಲ್ಲಿ ನೀರು ತಂದಿದ್ದೇನೆ. ನಾನೂ ಟ್ಯಾಂಕರ್ ನೀರನ್ನು ಅವಲಂಬಿಸುವ ಸ್ಥಿತಿ ಇದೆ. ಕಷ್ಟ ಹೇಳಿಕೊಳ್ಳಲು ಜನಸ್ಪಂದನಕ್ಕೆ ಬಂದಿದ್ದೇನೆ’ ಎಂದು ಪ್ರಭಾವತಿ ಅಳಲು ಹೇಳಿಕೊಂಡರು.

‘ಮನೆಯ ತಾರಸಿಯಲ್ಲಿ ಕುಂಡದಲ್ಲಿ ಬೆಳೆಸಿದ್ದ ಗಿಡಗಳನ್ನೆಲ್ಲ ನೀರು ಪೂರೈಕೆ ಕಡಿಮೆ ಆದ ಕಾರಣ ಕಡಿಸಿದ್ದೇನೆ. ಪ್ರೀತಿಯಿಂದ ಬೆಳೆಸಿದ ಗಿಡಗಳನ್ನು ಕಡಿಯುವುದು ನೋವಿನ ಸಂಗತಿ. ಅದಕ್ಕೆ ಬಳಸುವ ನೀರು ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬುದು ನನ್ನ ಉದ್ದೇಶ’ ಎಂದು ಲಕ್ಷ್ಮೀನಾರಾಯಣ ಹೇಳಿದರು.

ಜನಸ್ಪಂದನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

ಅನುಚಿತ ವರ್ತನೆ –ಜನರ ಅಸಮಾಧಾನ:‘ಅಹವಾಲು ತೋಡಿಕೊಳ್ಳಲು ಹೋಗುವ ಸಾರ್ವಜನಿಕರ ಜೊತೆ ಜಲಮಂಡಳಿ
ಕಚೇರಿಯ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಾರೆ. ಕುಳಿತುಕೊಳ್ಳಿ ಎಂದು ಹೇಳುವ ಸೌಜನ್ಯವನ್ನೂ ತೋರಿಸುವುದಿಲ್ಲ. ಹಿರಿಯ ನಾಗರಿಕರ ಜೊತೆಗೂ ದರ್ಪದಿಂದ ವರ್ತಿಸುತ್ತಾರೆ’ ಎಂದು ಮಾರುತಿ ಬೇಸರ ತೋಡಿಕೊಂಡರು.

‘ಕಚೇರಿ ಸಿಬ್ಬಂದಿ ವರ್ತನೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಇಂಥಹ ಘಟನೆ ಮರುಕಳಿಸದು’ ಎಂದು ಕಾರ್ಯಪಾಲಕ ಎಂಜಿನಿಯರ್ ಭರವಸೆ ನೀಡಿದರು.

‘ಪ್ರತಿ ಮನೆಯಲ್ಲೂ ಇರಲಿ ಸಿಸಿಟಿವಿ ಕ್ಯಾಮೆರಾ’:‘ಪ್ರತಿ ಮನೆಯಲ್ಲೂ ಸಿಸಿಟಿವಿ ಕ್ಯಾಮೆರಾ, ಚಲನೆ ಪತ್ತೆ ಸಾಧನ (ಮೋಷನ್‌ ಡಿಟೆಕ್ಟರ್‌) ಹಾಗೂ ಕಳವು ಕರೆಗಂಟೆ (ಅಲಾರ್ಮ್‌) ಹೊಂದುವುದು ಅತ್ಯಗತ್ಯ. ಇವೆಲ್ಲದಕ್ಕೆ ಸೇರಿ ₹ 50 ಸಾವಿರದಷ್ಟು ವೆಚ್ಚವಾಗಬಹುದು. ನಾಲ್ಕೈದು ಮನೆಗಳು ಸೇರಿ ಇಂತಹ ವ್ಯವಸ್ಥೆ ಅಳವಡಿಸಬಹುದು’ ಎಂದು ಎಸ್‌.ಡಿ.ಶರಣಪ್ಪ ಸಲಹೆ ನೀಡಿದರು.

‘ವಾರ್ಡ್‌ನಲ್ಲಿ 35 ಉನ್ನತ ಗುಣಮಟ್ಟದ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಇದರಲ್ಲಿ ದಾಖಲಾಗುವ ಚಲನವಲನಗಳನ್ನು ವಾರ್ಡ್‌ನ ರಾಜ್‌ಕುಮಾರ್‌ ಪ್ರತಿಮೆಯ ಬಳಿ ದೊಡ್ಡ ಪರದೆ ಅಳವಡಿಸಿ ಪ್ರದರ್ಶಿಸಲಾಗುತ್ತದೆ’ ಎಂದು ಲಕ್ಷ್ಮೀನಾರಾಯಣ ತಿಳಿಸಿದರು.

ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದರು. ಅಹವಾಲುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.

ಎ.ಆರ್‌.ನಾಯಕ್‌: ನಮ್ಮ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಅನಧಿಕೃತವಾಗಿ ಪಿ.ಜಿ. ಆರಂಭಿಸಿದ್ದಾರೆ. ಎಂಟು ತಿಂಗಳಿನಿಂದ ಕಚೇರಿಯಿಂದ ಕಚೇರಿಗೆ ಅಲೆದರೂ ಅದನ್ನು ಮುಚ್ಚಿಸಲು ಸಾಧ್ಯವಾಗಿಲ್ಲ.

ಪಲ್ಲವಿ: ಈ ಬಗ್ಗೆ ವಿಚಾರಣೆ ಪೂರ್ಣಗೊಂಡಿದೆ. ಮೂರು ದಿನಗಳ ಒಳಗೆ ಆ ಪಿ.ಜಿ.ಯನ್ನು ಮುಚ್ಚಿಸಲಾಗುತ್ತದೆ.

ರಿಚರ್ಡ್‌ ಡಿಸೋಜ: ನಮ್ಮ ಮನೆ ಬಳಿ ರಸ್ತೆ ಅಗೆದು 9 ತಿಂಗಳು ಕಳೆದರೂ ಮುಚ್ಚಿಲ್ಲ. ನಿತ್ಯವೂ ಸಮಸ್ಯೆ.
ಪಲ್ಲವಿ, ಜಂಟಿ ಆಯುಕ್ತರು: ಜಲಮಂಡಳಿಯವರು ಬಿಬಿಎಂಪಿಗೆ ಹಣ ಪಾವತಿಸಿದ ಒಂದು ತಿಂಗಳಲ್ಲಿ ದುರಸ್ತಿ ಕೆಲಸ ಆರಂಭಿಸಲಾಗುತ್ತದೆ.

ರಾಧಿಕಾ ಗಿರಿರಾಜ್‌: ನಮ್ಮ ಬೀದಿಯಲ್ಲಿಕಸ ವಿಂಗಡಣೆ ವ್ಯವಸ್ಥೆ ಚೆನ್ನಾಗಿ ಅನುಷ್ಠಾನವಾಗಿದೆ. ಆದರೂ, ಎಚ್ಎಎಲ್‌ 13ನೇ ಮುಖ್ಯರಸ್ತೆ ಬಳಿ ಕಸದ ತೊಟ್ಟಿ ಇಟ್ಟಿದ್ದಾರೆ. ಜನ ಅಲ್ಲಿ ಬೇಕಾಬಿಟ್ಟಿ ಕಸ ಹಾಕಿ ಸಮಸ್ಯೆ ಆಗುತ್ತಿದೆ.

ಪಲ್ಲವಿ: ಕಸದ ತೊಟ್ಟಿಯನ್ನು ಇಡುವ ನಿರ್ಣಯ ಕೈಗೊಂಡಿದ್ದು ಕೇಂದ್ರ ಕಚೇರಿಯವರು. ಅದನ್ನು 3 ದಿನಗಳ ಒಳಗೆ ತೆಗೆಸುತ್ತೇವೆ.

ಅಶೋಕ್‌ ಕುಮಾರ್‌: ವಾರ್ಡ್‌ನಲ್ಲಿ ಮನೆ ಕಳವು, ಮೊಬೈಲ್‌ ಕಳವು, ಸರ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಿ.
ಎಸ್‌.ಡಿ.ಶರಣಪ್ಪ, ಡಿಸಿಪಿ: ಕಳವು ತಡೆಯಲು ಗಸ್ತು ಹೆಚ್ಚಿಸುತ್ತೇವೆ. ಬಾಲಾಪರಾಧಿಗಳೇ ಇಂತಹ ಕೃತ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಪೋಷಕರೂ ಮಕ್ಕಳ ಮೇಲೆ ಹೆಚ್ಚು ನಿಗಾ ಇಡಬೇಕು.

ಸಿಂಧು: ಮನೆಯ ನೀರಿನ ಮೀಟರ್‌ ಬದಲಾಯಿಸಿದ ಬಳಿಕ ಪ್ರತಿ ತಿಂಗಳು ₹ 5,500ವರೆಗೂ ಬಿಲ್ ಬರುತ್ತಿದೆ. ನಾವು ಇಷ್ಟೊಂದು ನೀರು ಬಳಸುತ್ತಿಲ್ಲ. ಈ ಬಗ್ಗೆ ದೂರು ನೀರಿದರೂ ಪ್ರಯೋಜನವಾಗಿಲ್ಲ.

ನಾಗರಾಜ್‌, ಜಲಮಂಡಳಿ ಎಇಇ: ಸಿಬ್ಬಂದಿ ಮನೆಗೆ ಬಂದು ಮೀಟರ್‌ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

ವಿಜಯಾ: ಜ.22ರಿಂದ ನೀರಿಲ್ಲ. ಅಧಿಕಾರಿಗಳು ಬಂದು ನೋಡಿ ಹೋದರೂ ಸಮಸ್ಯೆ ಬಗೆಹರಿದಿಲ್ಲ.

ನಾಗರಾಜ್‌: ಅಲ್ಲಿ ಕೆಲವೆಡೆ ಬ್ಲಾಕೇಜ್‌ ಸಮಸ್ಯೆ ಇರಬಹುದು. ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇವೆ ಜಾಯ್ಸ್‌ ಮೆಲ್ವಿನ್‌: ಎಂಐಜಿ ವಸತಿಗೃಹಗಳಲ್ಲಿ ಈ ಹಿಂದೆ ಬೇಸಿಗೆಯಲ್ಲಿ ಒಂದು ತಿಂಗಳು ಮಾತ್ರ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ವರ್ಷ ಪೂರ್ತಿ ಸಮಸ್ಯೆ.

ಧನವಂತ್‌, ಎ.ಇ, ಜಲಮಂಡಳಿ: ಈ ಬಗ್ಗೆ ದೂರು ನೀಡಿರಲಿಲ್ಲ. ಸೋಮವಾರವೇ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.